ಮನದಾಳ(ಭಾವಗೀತೆ)
ಮುಸ್ಸಂಜೆಯ ರಂಗೇರಿದ ರವಿ ಮುಳುಗಲು ಬಂದ
ಪುಸ್ಸಂತ ಸಾಗರದ ಒಳ ಸೇರಲು ಬಂದ//
ಕೇಸರಿಯ ಕೆಂಬಣ್ಣದ ಶಾಲನು ಅವ ಹೊದ್ದು,
ಸಾಗರಿಯ ಸೇರಲು ಬಲು ಆಸೆಯಲೇ ಇದ್ದು,
ಓಡುತಲಿ ಸಂಜೆಯ ಒಳಗೇ ಮನೆ ಸೇರಿ,
ಚಂದಿರನ ಕರೆ ಕರೆದು,ನಲ್ಲೆಯ ಬಳಿ ಸಾರಿ//೧//
ಸಾಗರದ ನೀರನು ತಾ ಮೊಗೆಮೊಗೆದು ಕುಡಿದು,
ಸಾಗರಿಯ ಸೇರುತಲೀ ಪಳಪಳನೇ ಹೊಳೆದು,
ನಿಶೆ ಸಾರೋ ಬಣ್ಣದಲಿ ದಗದಗನೇ ಉರಿದು,
ಇತರರಿಗೆ ಬೆಳಕಾಗಿ, ಮಿರಮಿರನೇ ನೆಗೆದು//೨//
ಉಷೆ ತಂದ ಆರತಿಯ ಬೆಳಕ ತಾ ಹೀರಿ,
ನಶೆ ಏರಿ ಕಡಲೊಳಗೆ ಸೂರ್ಯ ತಾ ಜಾರಿ,
ದಿಗಂತದ ಪಥದೊಳಗೆ ನೀ ಹೋದ ದಾರಿ,
ನಿನ್ನೆಲ್ಲಾ ಬೆಂಕಿಯದು ನೀರೊಳಗೆ ಸೇರಿ//೩//
ನಾಳೆ ಬರುವೆನು ಎನುವ ಸಂದೇಶ ಹೊತ್ತು,
ನೀ ಬರುವೆ ದಿನದಲ್ಲಿ ಬರುವಂತೆ ಮುತ್ತು!
ಜಗದ ಜನಕೆಲ್ಲ ನೀ ಬೇಕಾದ ಸೊತ್ತು,
ನೀನಿರದೆ ಬಾಳಿಲ್ಲ, ಬದುಕಿಲ್ಲ ಗೊತ್ತು//೪//
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ