ಮಂಗಳವಾರ, ಜನವರಿ 16, 2018

70. ಸಣ್ಣಕತೆ- ಇಳೆಯ ಕರೆ

ನಾನು ಒಂಟಿ ಕಣೋ ಸೂರ್ಯ!
ನಿನಗೋ ನಿನ್ನದೇ ಆದ ಸಾವಿರಾರು ಕೆಲಸಗಳು,ಬಾನಿಗೆ ಬರುವ ಮುಂಚೆಯೇ ರೆಡಿಯಾಗಿರುತ್ತವೆ ಫಿಕ್ಸ್ ಆಗಿ!ಆದರೆ ನಾ ಹಾಗಲ್ಲವಲ್ಲ, ಭಾವುಕ ಜೀವಿ ನಾನು,ನಿನ್ನನ್ನು ನೋಡುವ,ನಿನ್ನೊಡನೆ ಒಂದಿಷ್ಟು ಸಮಯ ಕಳೆಯುವ, ನನ್ನ ಕಣ್ಣುಗಳನ್ನು ನಿನ್ನ ಕಣ್ಣೊಳಗೆ ತೂರಿಸಿ, ಅಲ್ಲೆ ಗೂಡು ಕಟ್ಟುವ, ನನ್ನ ಭಾವನೆಗಳ ಮಾಲೆ ಮಾಡಿ ಪೋಣಿಸಿ,ಅದನು ನಿನ್ನ ಕೊರಳಿಗೆ ಹಾಕಿ,ನಿನ್ನಂದ ನೋಡುವ,ನಿನ್ನುಸಿರ ಬಿಸಿ ಸ್ಪರ್ಶಕೆ ಕಾದ ಬಕಪಕ್ಷಿ ನಾ!           ನಿನ್ನ ಪ್ರಪಂಚ ತುಂಬಾ ದೊಡ್ಡದಿರಬಹುದು, ಅದರಲ್ಲಿ ನಾನೊಂದು ನೂರನೇ ಒಂದಂಶ ಅಷ್ಟೆ!ಆದರೆ ನನ್ನ ಲೋಕ ತುಂಬಾ ಚಿಕ್ಕದು ಕಣೋ!ನನಗೆ ನೀನೇ ಬದುಕು,ನೀನೇ ಲೋಕ!
ಅಲ್ಲಿ ಬೇರೊಬ್ಬರ ಆಹ್ವಾನಕ್ಕೆ ಸ್ಥಳಾವಕಾಶ ಕೊಡಲ್ಲ ನಾ! ನೀ ಹಾಗಲ್ಲ, ನಿನ್ನ ಕೆಲಸವೆಲ್ಲ ಮುಗಿದ ಬಳಿಕ, ಸ್ಥಳ ಉಳಿದರೆ ಮಾತ್ರ ಅದು ನನಗೆ,ಆಗ ನೆನಪಾಗುತ್ತೇನೆ ನಾ ನಿನಗೆ! ಅದೇ ಕಣೋ ನನಗೂ ನಿನಗೂ ಇರುವ ವ್ಯತ್ಯಾಸ!
     ನೀ ಆಕಾಶ ನಾ ಭೂಮಿಯೇ ಆಗಿರಬಹುದು!ನೀನೂ ದಿಗಂತದಲ್ಲಿ ನನ್ನನ್ನು ಸೇರಲೇ ಬೇಕು,ನಾನಿಲ್ಲದೆ ನೀನಿಲ್ಲ! ನಿನ್ನೊಂದಿಗಿರಬಹುದು ಮೋಡ! ಆದರೆ ಇಳೆಯ ತೊರೆದು ನೀ ಹೇಗೆ ತಾನೇ ಇರಬಲ್ಲೆ ಸೂರ್ಯ? ನಿನ್ನ ಬಿರು ಬಿಸಿಲ ಕಾವನ್ನು ತಂಪಾಗಿಸಲು ಮೋಡಕ್ಕೆ ಸಾಧ್ಯವೇ? ಇಳೆಯೇ ಬೇಕಲ್ಲವೇ?
   ಅದು ಹೇಗೆ ನಿಶ್ಚಯಿಸಿಕೊಂಡೆ ಗೆಳೆಯಾ ಭುವಿಗಿಂತ ಮೋಡ ಮೇಲೆಂದು? ಇರಬಹುದು ಮೋಡ ಮೇಲೆ ಹಾರಾಡುತ್ತಾ, ಆದರೆ ಭುವಿಯ ತಾಳ್ಮೆ ಅದಕಿಹುದೇ ಗೆಳೆಯಾ? ಹೇಳು, ನಿನ್ನ ಮನಸಾರೆ ಹೇಳು ಗೆಳೆಯಾ ,'ಓ ಭೂಮಿಯೇ ನನ್ನ ಸುತ್ತ ಸುತ್ತಲು ನೀನೊಬ್ಬಳೇ ಅಲ್ಲ, ಹಲವಾರು ಗ್ರಹಗಳಿವೆ' ಎಂದು! ನನಗೆ ಗೊತ್ತು,ಎಷ್ಟೇ ಗ್ರಹ,ಉಪಗ್ರಹಗಳು ನಿನ್ನ ಸುತ್ತ ಸುತ್ತುತಲಿದ್ದರೂ ಜೀವ ಜಲವಿರುವ ಜೀವಂತ ಗ್ರಹ ಇಳೆ ಮಾತ್ರವೇ ತಾನೇ?
   ಚಂದ್ರನಿರಬಹುದು ನಿನಗೆ,ಆದರೆ ನಿನ್ನ ಬೆಳಕಿದ್ದರೆ ಮಾತ್ರ ಪ್ರತಿಬಿಂಬಿಸಲು.. ನಿನ್ನ ಕಾವನು ಸಹಿಸಿಕೊಂಡು ನಿನ್ನ ಸಲಹಬಲ್ಲ ಏಕೈಕ ಗ್ರಹ ಭೂಮಿ ಎಂಬ ಅರಿವು ನಿನಗಿದೆಯೋ ಇಲ್ಲವೋ ತಿಳಿದಿಲ್ಲ!
  ಸರಿ ಗೆಳೆಯಾ.. ಮುಂದೆ ಸಾಗು.. ಗ್ರಹಗಳನೇಕ ಕಾದಿರಬಹುದು ನಿನಗಾಗಿ.. ಆದರೆ ಈ ಧರಣಿಗೆ ಬೆಳಕೀವ ರವಿಯೊಬ್ಬನೇ. ಅದು ಆಶೀರ್ವಾದ!
  ನನ್ನ ಮುದ್ದು ಮನಸಿನ ಮೇಲೆ ನನ್ನದೇ ಮಕ್ಕಳಾದ ಮಾನವರ ದರ್ಪ ನಡೆಯುತಿದೆ!ನೀ ಉರಿಯುತಿಹ ಅಸಾಹಾಯಕ! ರಕ್ಷಿಸಲಾರೆ ನೀ ನನ್ನ! ನಿನಗೋ ನಿನ್ನದೇ ಲೋಕ! ನಾ ಎಲ್ಲರೊಳಗೆ ಒಂದು ಅಲ್ಲವೇ?
   ನನ್ನ ಪುಟ್ಟ ಪುಟ್ಟ ಕನಸುಗಳು, ಆಸೆಗಳಿಗೆಲ್ಲಾ ಆಗಲೇ ಎಳ್ಳು ನೀರು ಬಿಟ್ಟಿರುವೆ, ಕಾರಣ ಏನು ಗೊತ್ತಾ ನೀನು ಸಂಭಾಳಿಸಬೇಕಾದವರು ಹಲವರಿದ್ದಾರೆ,ನನಗೆ ನೀನು ಮಾತ್ರ, ಮೂಕ ವೇದನೆಯ ಪರಿಕರವಿದು! ನಿನಗಾಗಿ ನಾ ಹಗಲಿರುಳು ಪರಿತಪಿಸುವಂತೆ ನನಗಾಗಿ ಕಾಯಲಾರೆ ನೀ.ಕಾರಣ ನೀನು ಸರ್ವಾಂತರ್ಯಾಮಿ! ನಾ ಭೂಮಿಯಲ್ಲಿರುವೆ,ನೀ ಆಕಾಶದಲ್ಲಿ!
    ಆದರೆ ನಾ ಎಲ್ಲೇ ಇರಲಿ ಸೂರ್ಯ ನಾನು ನಾನೇ,ನಿನ್ನ  ಆ ಕಿರಣ ನನ್ನ ಸೋಕಲೇ ಬೇಕು, ದೈವ ನಿಯಮವದು! ನೀ ಹೇಗೆ ತಾನೇ ಬದಲಿಸಬಲ್ಲೆ?
   ನಿನ್ನುರಿ ನನ್ನೆದೆಯ ತಟ್ಟೀತು, ಆದರೆ ನನ್ನ ನೋವಿನ ಬವಣೆ ನಿನ್ನೆದೆ ಕದವ ತೆರೆದೀತೇ? ಬಾಳಲ್ಲಿ ಎಕ್ಸ್ಪೆಕ್ಟೇಶನ್ ಇದೆಯಲ್ಲಾ ಅದು ತುಂಬಾ ನೋವು ಕೊಡುತ್ತೆ! ನಾ ನಿನ್ನ ಸುತ್ತೋದು,ಅದರಿಂದ ಉಳಿದ ಗ್ರಹಗಳಿಗೆ ತಲೆ ತಿರುಗೋದು, ಟೆನ್ಶನ್ ಆಗೋದು ಯಾಕೋ?
  ಅದಕ್ಕೊಂದು ನಿರ್ಧಾರಕ್ಕೆ ಬಂದಿರುವೆ, ನನಗೆ ನಾನೇ ಕನಸ ಕಂಡು ಕನಸು ನನಸಾಗದಿರಲು ಆಗುವ ನೋವು ತಾಳಲು ಕಷ್ಟ. ಅದಕ್ಕೆಂದೇ ಕನಸು ಕಾಣುವುದನ್ನೇ ನಿಲ್ಲಿಸಿಬಿಡುವ ದೃಢ ಸಂಕಲ್ಪ ತೊಟ್ಟಿದ್ದೇನೆ! ಆಲ್ ದ ಬೆಸ್ಟ್ ಹೇಳೋ!
  ಮೊದಲಿನ ಒಂಟಿ ಜೀವನಕ್ಕೆ ಅಡಿಯಿಡುತ್ತಿದ್ದೇನೆ, ಯಾರೂ ಇಲ್ಲದ ಒಂಟಿ ಜೀವನ ನಡೆಸಲು! ಆ ಕನಸುಗಳೇ ಇಲ್ಲದ ಬದುಕೂ ನಮ್ಮಂಥವರಿಗೆ ಒಂಥರಾ ಚೆನ್ನಾಗಿರುತ್ತದೆ! ಕಮಲ ನೀರಲ್ಲೇ ಅರಳಿ, ಅಲ್ಲೇ ಬಿದ್ದು ಕೊಳೆತು ಹೋದಂತೆ!
   ಯಾರಿಗೂ ಕಾಯಬೇಕಾಗಿಲ್ಲ! ನಂಬಿಕೆಗೆ ಇದು ಕಾಲವಲ್ಲ! ಎಲ್ಲರೂ ಬ್ಯುಸಿಯಾಗಿರುವ ಕಾಲವಿದು, ಯಾರನ್ನು ನೋಡಲು ಯಾರಿಗೂ ಸಮಯವಿಲ್ಲ! ಅದರಲ್ಲೂ ಪರರ ನೋಡಲು ಸಮಯವೇ ಇಲ್ಲ!
    ನಿನ್ನನ್ನು ಹೇಳಿ ಪ್ರಯೋಜನವಿಲ್ಲ! ನನ್ನ ಹಣೆಬರಹವೇ ಒಂಟಿಯಾಗಿರಲೆಂದು ಬರೆದಿರುವಾಗ ಬ್ರಹ್ಮ ತಾನೇ ಎನು ಮಾಡಿಯಾನು?
ನನ್ನ ನೋವು ನನಗೇ ಇರಲಿ, ನೀ ಮುಂದುವರೆಸು ನಿನ್ನ ಪ್ರಯಾಣ!
ಈ ಇಳೆಯ ಚಿಂತೆ ನಿನಗೇಕೆ ಸೂರ್ಯ? ಖುಷಿಯಾಗಿರು,ನಿನ್ನ ಕಿರಣವ ಎಲ್ಲರೆಡೆ ಚೆಲ್ಲುತ್ತಾ, ನಿನ್ನ ಕಿರಣ ಸ್ಪರ್ಶದಿಂದಲೇ ನೆಮ್ಮದಿಯಾಗಿ ಕಾಲ ಕಳೆದು ಬಿಡುತ್ತೇನೆ. ನನ್ನ ನೋವೆಲ್ಲ ನನಗಿರಲಿ, ನಿನ್ನ ಕೆಲಸ ದೊಡ್ಡದಿದೆ, ಆರಾಮಾಗಿರು, ಆಯಾಸಪಡದಿರು. ನಿನಗೆ ಹೇಳಲು ನಾನಲ್ಲ, ಆದರೂ ಮನಸೊಪ್ಪದು, ನೀ ನನ್ನ ಜಗತ್ತು!
ನಂಬಿಕೆಯೇ ದೇವರು ಅಂತ ತಿಳಿದವರು ಹೇಳ್ತಾರೆ, ನಂಬಿಕೆಯಿಡಲೇ ಎಂದೆಂದೂ?  ಆ ನಂಬಿಕೆಯಿಂದಲೆ ನಿನ್ನ ಸುತ್ತ ಸುತ್ತುತ್ತಿರುವೆ....
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ