ಬುಧವಾರ, ಜನವರಿ 31, 2018

77. ನಾನು ಮೆಚ್ಚಿದ ಬೇಂದ್ರೆಯವರ ಕವನ

ನನ್ನ ನೆಚ್ಚಿನ ಬೇಂದ್ರೆಯವರ ಕವನ

ಬೇಂದ್ರೆಯವರ ಆಡುಭಾಷೆಯ,ಗ್ರಾಮೀಣ ಸೊಗಡಿನ,ನಾಡು-ನುಡಿಯ ಎಲ್ಲಾ ಕವನಗಳು ನನಗೆ ಅಚ್ಚುಮೆಚ್ಚೆಂದರೆ ತಪ್ಪಾಗಲಾರದು. 'ನಾರೀ ನಿನ್ನ ಮಾರೀ ಮ್ಯಾಗ ನಗೀ ನವಿಲ ಆಡತಿತ್ತ...' ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ..' ಇಲ್ಲಿನ ರೂಪಕಗಳು ಹೃನ್ಮನ ಸೆಳೆದರೆ, 'ಮೂಡಲ ಮನೆ...' ಪರಿಸರ,ನೇಸರನನ್ನು
ಸೂರ್ಯೋದಯವನ್ನು ವರ್ಣಿಸಿದ ಪರಿ ಅನುರಣನೀಯವಾಗಿದೆ.ನಾಕು ತಂತಿ ಪದಗಳ ಬಲೆಯಿಂದ ಅಂದವಾಗಿದೆ.'ನೀ ಹೀಂಗ ನೋಡಬ್ಯಾಡ ನನ್ನ...' ಕವಿ ತನ್ನ ಜೀವನದ ಸುಖ-ದುಃಖಗಳಲ್ಲೂ ಕವನವನ್ನೆ ಕಾಣುವ ಪರಿ ಉತ್ತಮವಾಗಿದೆ.
    ನನ್ನ ನೆಚ್ಚಿನ ಕವನದ ವಿಷಯ ಬಂದಾಗ ನಾನು 'ನಾನು ಬಡವಿ,ಆತ ಬಡವ ಒಲವೆ ನಮ್ಮ ಬದುಕು..
ಬಳಸಿಕೊಂಡೆವದನೆ ನಾವು
ಅದಕು,ಇದಕು ಎದಕು..' ಈ ಕವನ ಸಮಾಜದ ಸಾಮಾನ್ಯ ವರ್ಗದ ಜನರಿಗೆ ಮಹತ್ತರವಾದ ಸಂದೇಶವನ್ನು ನೀಡುವ ಪರಿ ಬಣ್ಣಿಸಲಸಾಧ್ಯ.
   ಗಂಡನೊಡನೆ ಚಿನ್ನ,ಸೀರೆಗಾಗಿ ಪೀಡಿಸಿ ಜಗಳವಾಡುವ ಮಹಿಳೆಯರಿಗಂತೂ ಹೊಂದಿಕೊಂಡು ಬದುಕುವ ಪಾಠ ಇದೆಂದರೆ ತಪ್ಪಾಗಲಾರದು.'ತೋಳುಗಳಿಗೆ ತೋಳಬಂದಿ,ಕೆನ್ನೆ ತುಂಬಾ ಮುತ್ತು!'
  ನಮ್ಮ ಮನೆ-ಮನದ ವಿಚಾರ ನಮ್ಮಲ್ಲೇ ಬಗೆಹರಿಸಿಕೊಂಡು ಕುಟುಂಬ ಒಂದಾಗಿ ಹಾಲು-ಜೇನಿನಂತೆ ಇರಬೇಕೆಂಬ ಕವಿಭಾವ ಅತ್ಯದ್ಭುತವಲ್ಲವೇ?
    ಈ ಜಗತ್ತು ಕವಿಯಿಂದ ಬಯಸುವುದು ಒಂದೊಳ್ಳೆ ಅರ್ಥಪೂರ್ಣ ಕವನ. ಅಲ್ಲಿನ ಶ್ರೀ ಸಾಮಾನ್ಯನ ಜೀವನವನ್ನು ಕವಿಯ ಕವನ ಬದಲಿಸಿ, ಒಳ್ಳೆಯ ಬದುಕಿಗೆ ಅವಕಾಶ ಕಲ್ಪಿಸಬೇಕು. ಅಷ್ಟು ಕಾರ್ಯ ಇಂಥ ಒಂದು ಕವನ ಮಾಡಿದ್ದೇ ಆದರೆ ಕವಿಗೂ ಖುಷಿ, ಓದುಗರಿಗೂ ಸಂತಸ. ಅಂತಹ ಕೆಲವೇ ಕೆಲವು ಕನ್ನಡ ಕವನಗಳಲ್ಲಿ ಬೇಂದ್ರೆಯವರ ಈ ಕವನ ಎಂದಿಗೂ ಅಜರಾಮರವಲ್ಲವೇ? ನೀವೇನಂತೀರಿ?
     @ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ