ಪುಟ್ಟಣ್ಣನ ಬಗ್ಗೆ ಒಂದಿಷ್ಟು..
"ಡೆಡ್ ಮ್ಯಾನ್ ಈಸ್ ಗುಡ್ ಮ್ಯಾನ್ " ಅಂತ ಆಂಗ್ಲ ಭಾಷೆಯಲ್ಲೊಂದು ಗಾದೆಯಿದೆ. ಸತ್ತವರನ್ನು ಎಲ್ಲರೂ ಒಳ್ಳೆಯವರೆಂದೇ ಹೇಳ್ತಾರಂತೆ, ಆದರೆ ಅದಕ್ಕೆ ವ್ಯತಿರಕ್ತವಾದ, ಸ್ವ ಅನುಭವದ ನುಡಿಗಳಿವು.ಮಾರ್ಚ್ ದಿನಾಂಕ 18ರ ಬೆಳಿಗ್ಗೆ 11.15ರ ಸುಮಾರಿಗೆ ಹೃದಯ ಸ್ತಂಬನ ದಿಂದ ಕೊನೆಯುಸಿರೆಳೆದ ಅಂಗಡಿಯ ಪುಟ್ಟಣ್ಣನ ಬಗ್ಗೆ ನನ್ನ ಒಂದೆರಡು ಅನಿಸಿಕೆಗಳನ್ನು ನಾ ನಿಮ್ಮೊಡನೆ ಹಂಚಿಕೊಳ್ಳಲೇ ಬೇಕು.
2011ರ ಮಾರ್ಚ್ ತಿಂಗಳು, ಅಂದರೆ ಸರಿ ಸುಮಾರು ಹತ್ತು ವರುಷಗಳ ಹಿಂದೆ, ಯಾರೂ ನನ್ನನ್ನು ನಾನಾರು ಎಂದು ಅರಿಯದ ಊರು ಇದಾಗಿತ್ತು. ನಾನು ಕೈಲೊಂದು ಅಪಾಯಿಂಟ್ ಮೆಂಟ್ ಕಾಗದ ಹಿಡಿದು ಐವರ್ನಾಡು ಎಂಬ ಊರಿಗೆ ಹೆಜ್ಜೆಯಿಟ್ಟಿದ್ದೆ. ಮದುವೆ ನಿಶ್ಚಯವಾಗಿತ್ತು. ಮೇ ತಿಂಗಳಿನಲ್ಲಿ ನಡೆಯಲಿದ್ದ ಮದುವೆಯ ಕರೆಯೋಲೆ ಕೈಯಲ್ಲೆ ಹಿಡಿದು ಬಂದಿದ್ದೆ. ಹಾಗೆ ಬರುವಾಗ ಕಾಲೇಜು ನೋಡಿ, ಹೊಸ ಊರು, ಅಪರಿಚಿತ ಜಾಗ,ಅಕ್ಕಪಕ್ಕ ಹೇಗಿದೆ ತಿಳಿಯೋಣ, ಎಂದು ನಾನು ಮೊದಲು ಹೋದದ್ದು ಪುಟ್ಟಣ್ಣನ ಅಂಗಡಿಗೆ. ಯಾರೇ ಬರಲಿ ನಗುವಿನ ಸ್ವಾಗತ ಪುಟ್ಟಣ್ಣನದು.
ಎರಡು ಬೆಂಚುಗಳನ್ನಿಟ್ಟು ಅದರ ಮೇಲೆ ಕುಳಿತುಕೊಂಡೇ ಪ್ರತಿನಿತ್ಯ ಉಪಯೋಗಿಸುವ ಪ್ರತಿಯೊಂದು ರೇಶನ್ ವಸ್ತುಗಳ ಜೊತೆ ತರಕಾರಿ, ಹಾಲು, ಮೊಸರು, ಚಪ್ಪಲಿ, ಐಸ್ ಕ್ರೀಮನ್ನೂ ಮಾರುತ್ತಿದ್ದರು ಪುಟ್ಟಣ್ಣ. ಅವರ ಬಗ್ಗೆ ಹಲವಾರು ವರುಷಗಳ ಮೊದಲೇ "ನಮ್ಮ ಬಂಟ್ವಾಳ" ವಾರ ಪತ್ರಿಕೆಯಲ್ಲಿನ ನನ್ನ ಅಂಕಣ "ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ" ಯಲ್ಲಿ ನಾ ಬರೆದಿರುವೆ. ನನಗೀಗಲೂ ಆಶ್ಚರ್ಯ. ಏನು ಗೊತ್ತಾ, ಗಂಡ, ಹೆಂಡತಿ, ಮಕ್ಕಳು ನಿಂತರೂ ಒಂದು ರೇಶನ್ ಅಂಗಡಿಯಲ್ಲಿ ಬಂದ ಗ್ರಾಹಕರ ನಿಭಾಯಿಸಲಾಗದೆ ಒದ್ದಾಡುತ್ತ, ಬೇಡವೆನುತ ವ್ಯವಹಾರವನ್ನೇ ಬಿಡುವ ಹಲವಾರು ಜನರ ಮುಂದೆ ನಡೆಯಲೂ, ನಿಲ್ಲಲೂ ಸಾಧ್ಯವಾಗದ ಪುಟ್ಟಣ್ಣ ಇಷ್ಟೆಲ್ಲಾ ವಸ್ತುಗಳ ವ್ಯಾಪಾರ ಹೇಗೆ ಮಾಡುತ್ತಿದ್ದರೋ?
ಸಿಸಿ ಟಿವಿ ಇಟ್ಟು, ಅದರಲ್ಲಿ ನೋಡುತ್ತಾ,ಹಲವಾರು ಜನರ ಬಗ್ಗೆ ತಮ್ಮ ಭಾವನೆಗಳ ಹೇಳುತ್ತಾ ಇರುತ್ತಿದ್ದ ಮನುಷ್ಯ. ನಗುಮೊಗದೊಂದಿಗೆ ಸರ್ವರ ಸ್ವಾಗತಿಸುತ್ತಾ, ಮೊಬೈಲ್, ಡಿಟುಎಚ್ ಟಿವಿ ಕರೆನ್ಸಿ, ಹಲವಾರು ಜನರ ಖಾಲಿ ಗ್ಯಾಸ್ ಸಿಲಿಂಡರ್ ಅಲ್ಲಿಟ್ಟು, ಫಿಲ್ಡ್ ಇಳಿಸಿ ಕೊಡುವ ಜವಾಬ್ದಾರಿ ಎಲ್ಲವನ್ನೂ ಒಂದೇ ಸ್ಥಳದಲ್ಲಿ ಕುಳಿತು ಮಾಡಿ, ಅಂಗವೈಕಲ್ಯವಿರುವವರು ಯಾರನ್ನೂ ಡಿಪೆಂಡ್ ಆಗದೆ ಬಾಳಲು ಸಾಧ್ಯವಿದೆಯೆಂದು ತೋರಿಸಿದ ವ್ಯಕ್ತಿ. ಆ ನಗುಮೊಗ, ಹುಮ್ಮಸ್ಸು, ಸದಾ ವಿಚಾರ ವಿಮರ್ಶೆ, ಗೌರವಯುತ ನಡವಳಿಕೆ ಇವೆಲ್ಲ ನಾನು ಗಮನಿಸಿದ ಅಂಶಗಳು. ಅಂಗಡಿಯ ಬಳಿ ಹೋದಾಗ ಎಲ್ಲವೂ ಒಟ್ಟಾಗಿ ಬಂದು ಸಾಧಾರಣ ಮನುಷ್ಯ ಹೀಗೂ ಬಾಳಲು ಸಾಧ್ಯವಿದೆಯೆಂಬುದನ್ನು ತೋರಿಸುವಂತೆ, ಎದ್ದು ಹೋದ ಹಾಗೆ ಹೋದಂತೆ ಭಾಸವಾಗುತ್ತದೆ. ಭೂಮಿಗೆ ಬಂದು ಹೋಗುವಾಗ ನಮ್ಮ ಒಳ್ಳೆಯ, ಕೆಟ್ಟ ಕೆಲಸಗಳು, ಪ್ರೀತಿ, ದ್ವೇಷದ ಜಂೂತೆ ಜನರ ಹೃದಯದಲ್ಲಿ ಬೇರೂರಿದ ನಮ್ಮ ಬಗೆಗಿನ ಅನಿಸಿಕೆಗಳನ್ನು ಬಿಟ್ಟು ಹೋಗುತ್ತೇವೆ. ಭಾವನೆಗಳಿಗೆ ಸಾವಿಲ್ಲ, ಜಾತಿ,ಮತ, ಧರ್ಮ, ಜಗಳವೆಲ್ಲ ಸಾವಿನ ಎದುರು ಶೂನ್ಯವಲ್ಲವೇ?
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ