ಹೌದು, ಅಮ್ಮ ತ್ಯಾಗ ಮಾಡದೆ ಹೋಗಿರುತ್ತಿದ್ದರೆ ನಾನು ವಿದ್ಯಾ ಇಲಾಖೆ, ನನ್ನ ತಂಗಿ (ಸಂಪಾ ಕೆ) ಪೊಲೀಸ್ ಇಲಾಖೆ, ಹಾಗೂ ತಮ್ಮ (ರಾಜೇಶ್ ಕೆ) ಟೊಯೋಟಾ ಕಿರ್ಲೋಸ್ಕರ್ ಎಂಬ ವಿದೇಶೀ ಮೂಲದ ಕಂಪನಿಯಲ್ಲಿ ಐದಂಕಿ ಸಂಬಳ ಪಡೆಯಲು ಸಾಧ್ಯವಿರಲಿಲ್ಲ! ಮಾತೆಗೆ ಶರಣೋ ಶರಣು.
ಬಾಲ್ಯದಲ್ಲಿ ನಾವಿದ್ದದ್ದು ಕುದುರೆಮುಖ ಎಂಬ ಕಾಡು ಪ್ರದೇಶಕ್ಕಿಂತಲೂ ಮೂರು ಮೈಲಿ ದೂರದ ಜೆ.ಪಿ. ಎಂಬ ಕಾಡಿನ ಮಧ್ಯದಲ್ಲಿ! ನಮಗೆ ಉಪಕಾರವೆಂಬುದು ಆಗಿದ್ದು ನಮ್ಮ ಮನೆ ಭದ್ರಾ ಟೈಗರ್ ಪ್ರಾಜೆಕ್ಟ್ ಒಳಗೇ ಇದ್ದರೂ ರಸ್ತೆ ಬದಿಯಲ್ಲೇ ಇದ್ದದ್ದು!
ರಸ್ತೆಯಲ್ಲಿ ಓಡಾಡುವ ವಾಹನಗಳ ನೋಡಿ ಬೆಳೆದವರೇ ಹೊರತು ಮನುಷ್ಯರನ್ನು ನೋಡಬೇಕೆಂದರೆ ಬಹು ದೂರ ಹೋಗಬೇಕಿತ್ತು ಅಲ್ಲಿ. ಒಂದು ಕಿಲೋ ಮೀಟರ್ ನಷ್ಟು ದೂರ ಕ್ರಮಿಸಿದ ಬಳಿಕ ಒಂದೆರಡು ಅದೇ ಊರಿನಲ್ಲಿ ಹುಟ್ಟಿ ಬೆಳೆದ ಮಲೆಕುಡಿಯರ ಮನೆಗಳಿದ್ದವು. ಅವರು ಕಾಡಿನ ಉತ್ಪತ್ತಿ, ವ್ಯವಸಾಯವನ್ನು ನಂಬಿ ಬದುಕುವವರಾಗಿದ್ದರು.
ನಮಗೆ ಶಾಲೆ ನೋಡಬೇಕೆಂದರೆ ಕುದುರೆಮುಖಕ್ಕೆ ಬಸ್ಸಿನಲ್ಲೋ, ನಡೆದೋ ಕ್ರಮಿಸಬೇಕಿತ್ತು. ದಿನದಲ್ಲಿ ನಾಲ್ಕೋ- ಐದೋ ಬಸ್ಸುಗಳಿದ್ದವು. ಉಳಿದಂತೆ ನಮ್ಮ ಬಳಕೆಗೆ ಕಾಡ ತೊರೆಯ ನೀರು, ಕಾಡಿನ ಹಲಸು, ಗೆಡ್ಡೆಗಳ ಸಾರು! ದನಗಳನ್ನು ಕಟ್ಟಿಕೊಂಡು, ಕಾಡಿಗೆ ಬಿಟ್ಟು ರಾತ್ರಿ ಕರೆದುಕೊಂಡು ಬಂದು ಸಲಹಿ ಹಾಲು ಕರೆದು ಭುಜದ, ಕೈಚೀಲಗಳಲ್ಲಿ ಬಾಟಲಿಗಳಲ್ಲಿ ತುಂಬಿಸಿಟ್ಟು ಪ್ರತಿ ಮನೆ ಬಾಗಿಲಿಗೂ ನಿತ್ಯ ಹತ್ತರಿಂದ ಇಪ್ಪತ್ತು ಲೀಟರ್ ನಷ್ಟು ಹಾಲು ಹೊತ್ತುಕೊಂಡೇ ಹೋಗಿ ಮಾರಿ ಬರುತ್ತಿದ್ದ ಅಪ್ಪನ ಕಠಿಣ ದುಡಿಮೆ. ತಿಂಗಳ ಕೊನೆಗೆ ಸಿಕ್ಕಿದ ಹಣವನ್ನೆಲ್ಲ ದನಗಳ ಹಿಂಡಿಗೆ ಹಾಕುತ್ತಿದ್ಗ ಅಪ್ಪನಿಗೆ ಊರುಗೋಲಾಗಿದ್ದು ಕೂಲಿ ಕೆಲಸ ಮಾಡಿದ ಅಮ್ಮ.
ತನ್ನ ಮೂವರು ಮಕ್ಕಳನ್ನೂ ಯಾವ ಕಾರ್ಯಕ್ರಮ, ಮನೆಗೆ ತೆರಳದೆ ಕಷ್ಟಪಟ್ಟು ರಾತ್ರಿ ಹಗಲು ದುಡಿದು ಹೆಣ್ಣು ಮಕ್ಕಳನ್ನು ಸ್ನಾತಕೋತ್ತರ ಪದವಿವರೆಗೆ, ಮಗನನ್ನು ಐಟಿಐ ನಂತಹ ತಾಂತ್ರಿಕ ಕೋರ್ಸಿನವರೆಗೆ ಮನೆಯಲ್ಲಿ ವಿದ್ಯುತ್ ಇಲ್ಲದೆ, ಯಾವುದೇ ಹೊಸ ಯುಗದ ವಸ್ತುಗಳಿಲ್ಲದ ಕತ್ತಲ ಕೂಪದಂತಿದ್ದ ಊರಿನಲ್ಲೂ ಹಠ ಬಿಡದೆ ಸಾಧಿಸಿದ ಛಲಗಾರ್ತಿ ಅಮ್ಮ ನಮ್ಮ ಬದುಕನ್ನು ಬದಲಾಯಿಸಿ ಬಿಟ್ಟ ದೇವತೆಯೇ ಸರಿ!
@ಪ್ರೇಮ್@
ಪ್ರೇಮಾ ಉದಯ್ ಕುಮಾರ್
ಸಹ ಶಿಕ್ಷಕರು
ಸ.ಪ.ಪೂ.ಕಾಲೇಜು ಐವರ್ನಾಡು
ಸುಳ್ಯ , ದ.ಕ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ