ಶುಕ್ರವಾರ, ಜನವರಿ 1, 2021

ಅಂದು-ಇಂದು


ಅಂದು-ಇಂದು
(ಬದುಕಿನ ಸಿಂಹಾವಲೋಕನ)

ಅಂದು ನಾನು ಬೆಳೆದಿರಲಿಲ್ಲ ಇಷ್ಟು ಪಕ್ವವಾಗಿ
ಆದರೂ ಬೆರೆಯುತ್ತಿದ್ದೆ ಸರೀಕರೊಡನೆ ಸಮಾನವಾಗಿ
ಆಡಿ,ನಲಿದೋಡುತ್ತಿದ್ದೆ ದ್ವೇಷವೆಂಬ ಪದವರಿಯದೆ
ಎಲ್ಲರ ಪ್ರೀತಿಸುತಲಿದ್ದೆ ಜಾತಿ ಮತ ಧರ್ಮದ ಭೇದವಿಲ್ಲದೆ..

ಇಂದು ನಾ ಬೆಳೆದಿರುವೆ ಬೌದ್ಧಿಕ, ಮಾನಸಿಕ, ದೈಹಿಕವಾಗಿ
ಹೋಗಿಹುದು ತಾಳ್ಮೆ,ಪ್ರೇಮ, ಸಹನೆ ಕಡಿಮೆಯಾಗಿ!
ದುಡಿಯುತಲಿರುವೆ ಸದಾ ಕಾಗದದ ಹಣಕ್ಕಾಗಿ,
ಬರುತ್ತಲೇ ಇಲ್ಲ ನೆಮ್ಮದಿ, ಕಾಯುತಿರುವೆ ಅದಕ್ಕಾಗಿ!!

ಅಂದು ನಾ ಹೋಗುತಲಿದ್ದೆ ಆಚೀಚಿನ ಪ್ರತಿ ಮನೆಗೂ
ಬೆರೆತು ಮಾತನಾಡಿ ತಣಿಯುತಿದ್ದೆ ಪ್ರತಿ ಕ್ಷಣವೂ
ಮೇಲು ಕೀಳೆಂಬ ಭಾವನೆಯಿರಲೇ ಇಲ್ಲ ಅಲ್ಪವೂ
ಬಡವ ಬಲ್ಲಿದರೆಂಬ ಪದಗಳ ತಿಳಿದಿರಲೇ ಇಲ್ಲ ಮನವು!!

ಇಂದು ಅರಿತಿಹೆ ನಾನು ಹಲವಾರು ಭಾಷೆಗಳನು
ಆದರೆ ಸಮಯವಿಲ್ಲ ಮಾತನಾಡಿಸಲು ಯಾರನ್ನೂ!
'ದುಡಿವ ಕಾಯಕ' ಒಂದೇ ಹಗಲೂ, ಇರುಳೂ
ಆದರೇನು? 'ತೃಪ್ತಿ' ಎಂಬ ಪದ ಸಿಗಲೇ ಇಲ್ಲ ಕೊನೆಗೂ!

ಅಂದು ನಾ ತಿನ್ನುತಲಿದ್ದೆ ಹಸಿ ಬಿಸಿಯ ಆಹಾರ
ಸೊಪ್ಪು ತರಕಾರಿ ಸಿಕ್ಕ ಗುಡ್ಡದ ಹಣ್ಣುಗಳ ಹಾರ!
ನದಿ ನೀರ ಸ್ನಾನ, ಕುಡಿಯಲು ಬಾವಿಯ ಸಿಹಿನೀರು!
ರೈಲು ಬಂಡಿಯಲಿ ಗೆಳೆಯರೊಡನಾಟದ ತೇರು!

ಇಂದು ಆಳ ಬೋರಿನ ನೀರು, ಊಟ ಕರಗದು!
ತರತರ ತರಕಾರಿ ಬಣ್ಣ ಬಣ್ಣದ ಹಣ್ಣುಗಳ ರುಚಿ ಹಿಡಿಸದು!
ಕರಿದ, ಬೇಗನೆ ತಯಾರಾಗುವ ಆಹಾರದೆಡೆ ಸೆಳೆತ,
ಆರೋಗ್ಯಕ್ಕೆ, ತಿಂದುದ ಕರಗಿಸಲು ಓಟ, ನೆಗೆತ!

ಅಂದು ಇಂದಿನ ಪಯಣದಲಿ ಕಳೆದಿಹುದು
ಹಲವು ವರುಷಗಳ ಅನುಭವದ ಮಿಲನ!
ವಸಂತಗಳು ಸಾಗಿದಷ್ಟು "ಬುದ್ಧಿಯಿರದ ಅಂದಿ"ನ ಅನುರಣನ!
ಸಾಧನೆ, ಹಣ, ಮಾಲೆ, ಹಾರ ತುರಾಯಿ ಫಲಕವೆಲ್ಲ ಗತ್ತಿಗಾಗಿ!
ಮನದೋಟ ಮತ್ತೊಮ್ಮೆ ಮಗದೊಮ್ಮೆ ಬಾಲ್ಯದ "ಅಂದಿ"ಗಾಗಿ!!
@ಪ್ರೇಮ್@
19.01.2020

ಪ್ರೇಮಾ ಉದಯ್ ಕುಮಾರ್ ಸುಳ್ಯ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ