ಶುಕ್ರವಾರ, ಜನವರಿ 1, 2021

ನೆನಪಿರಲಿ

ನೆನಪಿರಲಿ

ಒಂಭತ್ತು ತಿಂಗಳು ಹೊತ್ತ ಮುತ್ತಿನಂಥ  ಹೆತ್ತಬ್ಬೆಯ
ಕಷ್ಟ ಪಟ್ಟು ಇಷ್ಟದಿ ಸಾಕಿದ ಅಷ್ಟ ಲಕ್ಷ್ಮಿಯಂಥ ತಾಯಿಯ
ಕೋಪ ತಾಪಗಳಿದ್ದರೂ ಪಾಪುವನು ತೊರೆಯದಿಹ ಮಾತೆಯ
ತಾಳ್ಮೆಯ ರೂಪದಿ ಜಾಣ್ಮೆಯ ಕಲಿಸಿದ ನೆಲ್ಮೆಯ ದೇವಿಯ
ನೆನಪಿರಲೆಂದೂ ಕನಸು ನನಸಲೂ ಮನದಿ ನಿರಂತರ..

ಮುದ್ದಿನ ಗುದ್ದಿನ ಜೊತೆಯಲಿ ಮದ್ದಿನ ಬುದ್ಧಿಯ ಕಲಿಸಿದ ಮೊದಲ ಗುರುವಿನ
ದ್ರವ್ಯವನಿತ್ತು ಕಾವ್ಯವ ಕಟ್ಟಿ ಭವ್ಯ ಬಾಳನು ರೂಪಿಸಿದವ್ವನ
ಮಂಜಿನ ಹನಿಯಲು, ಪಂಜಿನ ಬೆಳಕಲು, ಗಂಜಿಯ ಕುಡಿಯುತ, ಅಂಜದೆ ಸಾಕಿದ ಮಾತೆಯ
ನೆನಪಿರಲೆಂದೂ ಕನಸು ನನಸಲೂ ಮನದಿ ನಿರಂತರ..

ನಿರಂತರ ತನ್ನೊಲವನು ಹರಿಸಿದ ತನ್ನವಳ
ಹಿತವನೇ ಕೊರುವ ಕತೆಯಂತಿರುವವಳ
ಪಥದಲೆಂದೂ ಮುಳ್ಳ ತೆಗೆದು ನಡೆಸುವವಳ
ತನ್ನೆದೆಯ ಅಮೃತವಿತ್ತು ಹಾಲುಣಿಸಿದವಳ
ನೆನಪಿರಲೆಂದೂ ಕನಸು ನನಸಲೂ ಮನದಿ ನಿರಂತರ..

ತನ್ನದೆಲ್ಲವ ನೋವ ನುಂಗಿ ಕಾವ ಕೊಟ್ಟವಳ
ಹಸಿವ ಮರೆತು ಬಸವಳಿದು ಹೋದರೂ ಪೊರೆದವಳ
ಕಸವ ಗುಡಿಸಿ ಪರರ ಬಟ್ಟೆಯೊಗೆದು ಸಾಕಿ ಸಲಹಿದವಳ
ಮುಸುರೆ ತಿಕ್ಕಿ ಮಣ್ಣು ಹೊತ್ತು ಕಲ್ಲ ಕಡಿದು ನೋಡಿಕೊಂಡವಳ
ನೆನಪಿರಲೆಂದೂ ಕನಸು ನನಸಲೂ ಮನದಿ ನಿರಂತರ..
@ಪ್ರೇಮ್@
29.11.2020

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ