ಶುಕ್ರವಾರ, ಜನವರಿ 1, 2021

ಗಡಿಯಾರ


ಗಡಿಯಾರದೆಡೆ ಗಮನ

ಗುಡಿಯ ಗುಂಟ ಗುನುಗು ಗಾನ
ಗೌರವದ ಗೌಜೀಲೆ ಗಾಯನ..
ಗೋರಿ ಸುತ್ತ ಗುಡುಗು ಶಬ್ದ
ಗುಮ್ಮನಂತೆ ಹೂಂಕಾರವೆದ್ದು..

ಗೌಪ್ಯದಲ್ಲಿ ಸ್ನೇಹದ ಗೋಳು
ಗಡಿಬಿಡಿಯಲಿ ಗಮನ ಹೋಳು
ಗೋಡೆಗಿದೆ ಕಿವಿಯು ತಾಳು
ಗಂಡು ಮೇಲು, ಹೆಣ್ಣು ಕೀಳು!

ಗಿಡಮರಗಳ ಕತ್ತರಿಸಿ ಬಾಳು
ಗೀಜಗದ ಗೂಡ ನೋಡು ಬೋಳು!
ಗಂಭೀರತನದಿ ಬದುಕಿ ನೋಡು
ಗಂಜಲವ ಕುಡಿದ ದನವೆ ಮೇಲು!

ಗೌರಿಯಂಥ ನಡಿಗೆ ನೋಡು
ಗೋಧಿ ತಿಂದು ತೆಳ್ಳಗಾಗು!
ಗಹನವಾಗಿ ಆಲೋಚಿಸುತಿರಲು
ಗದರಿಸುತ್ತ ಹಿರಿಯರು ಬರಲು!

ಗುಲಾಬಿ ರಂಗು, ಮುಳ್ಳ ಕಡಿತ
ಗರಗರನೆ ಹೃದಯ ಭಯದಿ ಬಡಿತ!
ಗರ್ಭದಲ್ಲೆ ರಾಸಾಯನಿಕ ವಿಷ ಹಿಡಿತ!
ಗೋರಿವರೆಗೂ ಆರೋಗ್ಯ ಕಡಿತ!!

ಗಂಧದ ಮರವು ಪೂರ್ತಿ ನಾಶ
ಗಾರ್ದಭದಂತೆ ಕಣ್ಮುಚ್ಚಿ ಅನುಕರಣಾ ಪಾಶ!
ಗಿಳಿಯ ಮಾತಿನಂಥ ವಚನ ಹೊರಗೆ,
ಗಿಡುಗನಂತೆ ಸಾಯಿಸಿ ತಿನ್ನೊ ಮನವು ಒಳಗೆ!

ಗಜದ ಗಮನ ಗತಿಯ ನಡುಗೆ
ಗುಬ್ಬಿಯಷ್ಟೆ ಗಮನ ಹೊರಗೆ
ಗೂನು ಬೆನ್ನು ಕೈಲಿ ಜಂಗಮ ಗಂಟೆ ಸುಲಿಗೆ!
ಗೂಡಿನೊಳಗೆ ಸದಾ ಬಂಧಿ ಕೊನೆಗೆ!

ಗಮನವಿಲ್ಲ ಗಡಿಯಾರದೆಡೆಗೆ
ಗೇಲಿ ಮಾಡಿ ಪರರ ಬಾಳು ನಿನಗೆ
ಗಂಟು ಕಟ್ಟೊ ಕಾರ್ಯ ಕೊನೆವರೆಗೆ
ಗೋರಿ ಬಾಚಿ ತುಂಬಿಸಿಕೋ ಜೋಳಿಗೆ!

ಗಬಗಬನೆ ತಿನ್ನು, ಕೊಂಡ್ಹೋಗಲಾರೆ ಹೋಳಿಗೆ!
ಗಿಂಡಿ-ಗಡಿಗೆಯಷ್ಟಿದ್ದರೂ ಮನೆಯ ಒಳಗೆ!
ಗಂಡ ಹೆಂಡತಿ,ಮಕ್ಕಳ ಪ್ರೀತಿ ಇರುವ ವರೆಗೆ!
ಗೋಲಿಯ ಆಡುತ್ತ ಕಳೆದ ನೆನಪು ಕೊನೆವರೆಗೆ!

ಗೋಮೂತ್ರ ಕುಡಿದರೆ ಔಷಧ ಬೇಡವೆ?
ಗೋಶಾಲೆ ಕಟ್ಟಿ ಸಲಹೋದು ಅನ್ಯಾಯವೇ?
ಗೀಳಿನ ಹಿಂದೆ ಬೀಳೋದು ನ್ಯಾಯವೇ?
ಗೋಳಿನ ಬಾಳದು ಮುಗಿಯೋದು ಬೇಡವೇ?

@ಪ್ರೇಮ್@
03.02.2020

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ