ಬದುಕೊಂದು ಮಾಯೆಯೋ, ಮಾಯೆಯೊಳಗೆ ಬದುಕೋ?
ಈ ನೋವು ನಲಿವಿನ, ಸುಖ-ದುಃಖದ ಜೀವನದ ತೊಳಲಾಟಕೆ ಕೊನೆಯೆಂದು? ಮುಕ್ತಿಯೆಂಬ ಪದವಿದೆಯೇ ಜಗದಲಿ? ಯಾರಾದರೂ ಹೇಳಿದಂತೆಯೇ ನಡೆಯಲಾದೀತೇ ಪ್ರತಿಕ್ಷಣ? ತಪ್ಪಿ ನಡೆದವನಿಗೆ ಏನಾಯಿತು? ಸರಿಯಾಗಿಯೇ ನಡೆದವನಿಗೆ ನೋವಿಲ್ಲವೇ? ರಾಕ್ಷಸ, ಮಾನವ, ದಾನವರೆಲ್ಲರ ಗುಣವು ಮನುಜರೊಳಗೇ ಇದೆಯಲ್ಲವೇ?
ಒಂದು ಕ್ಷಣ ಖುಷಿಯಾದರೆ ಮರುಕ್ಷಣವೇ ನೋವು, ಕಷ್ಟ ಸಂಕಷ್ಟದಲ್ಲಿ ಬೆಂದು ಹೈರಾಣಾಗುವ ಜೀವನವಿದು. ಹೋರಾಟದ ಬವಣೆ. ಮೈಯೆಲ್ಲಾ ರಕ್ತಸಿಕ್ತವಾಗಿ, ಕೈಕಾಲುಗಳಲ್ಲಿ ಶಕ್ತಿ ಕಳೆದುಕೊಂಡು ಕೆಸರು ಮಣ್ಣಿನಲ್ಲಿ ಬಿದ್ದು ಹೋದರೂ ಸಹ ಎದುರಾಳಿಯೊಡನೆ ಗೆಲ್ಲ ಬೇಕಾದರೆ ಮತ್ತೆ ಹೇಗಾದರೂ ಇದ್ದ ಶಕ್ತಿಯನ್ನೆಲ್ಲ ಒಗ್ಗೂಡಿಸಿ ಹೋರಾಡಬೇಕು. ಇಲ್ಲವೇ ಹತನಾಗಬೇಕು. ಸೋಲೊಪ್ಪಿಕೊಂಡು ಬದುಕುವ ಬದುಕಿಗಿಲ್ಲಿ ಸ್ಥಾನವೇ ಇಲ್ಲ, ನೆಲೆಯೂ ಇಲ್ಲ.
ಇಲ್ಲಿ ನಾನು ನಾನಲ್ಲ, ನೀನು ನೀನಲ್ಲ, ನಾನು ನನಗಾಗಿ ಬದುಕುತ್ತಿಲ್ಲ, ಯಾರೂ ತನಗಾಗಿಯೂ ಇಲ್ಲ, ಯಾರಿಗಾಗಿಯೂ ಬದುಕುತ್ತಿಲ್ಲ, ಆದರೂ ಸಾವು ಯಾರಿಗೂ ಬೇಡ. ಸ್ವಾರ್ಥವೇ ಇಲ್ಲ ಎನುವವನಿಗೂ ಸಾವು ಬೇಡ. ಇಲ್ಲಿ ಎಲ್ಲವೂ ಇದೆ, ಜನಕ್ಕೆ ಎಲ್ಲವೂ ಬೇಕು. ಧನ, ಧಾನ್ಯ, ಐಶ್ವರ್ಯ, ಕನಕ, ವಜ್ರ, ವೈಡೂರ್ಯ, ಆಸ್ತಿ, ಹಣ, ಬೇಕು ಬೇಡದ ವಸ್ತುಗಳು, ತಿನಿಸುಗಳು, ಪೇಯಗಳು, ಹೆಣ್ಣು, ಹೊನ್ನು, ಮಣ್ಣು ಎಲ್ಲವೂ ಎಷ್ಟಿದ್ದರೂ ಬೇಕು! ಆದರೆ ಜೀವ ಭಯದ ಮುಂದೆ ಯಾರಿಗೂ ಏನೂ ಬೇಡ! ಜೀವವೊಂದುಳಿದರೆ ಸಾಕು ಅಷ್ಟೆ!
"ನಾನು ಸುರಕ್ಷಿತ" ಎಂಬ ಅನಿಸಿಕೆ ಇಲ್ಲಿ ಯಾರಲ್ಲೂ ಇಲ್ಲ . ಕಾರಣ ಯಾರಿಗೆ ಯಾರ ಮೇಲೂ ನಂಬಿಕೆಯಿಲ್ಲ! ದೇವರ ಮೇಲೂ ಇಲ್ಲ. ಯಾರೂ ತಮ್ಮತನ ಬಿಟ್ಟು ಕೊಡಲಾರರು. ಇಂದು ಈ ಕ್ಷಣ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುವ ವ್ಯಕ್ತಿ ಮರುಕ್ಷಣವೇ ಬೇರೆ ಯಾರೋ ಆಗಬಲ್ಲ, ತಿರುಗಿ ನಿಲ್ಲಬಲ್ಲ, ತನ್ನವರೆನಿಸಿಕೊಂಡವರೇ ತನ್ನ ಮರ್ಯಾದೆ ತೆಗೆಯಬಲ್ಲರು! ಮನೆಯೊಳಗೂ ಜಗಳ, ಮನದೊಳಗೊಂದು ಕದನ, ಹಾಹಾಕಾರ! ನಿತ್ಯವೂ ಸಮರದೊಂದಿಗಿನ ಸಮರಸದ ಬದುಕು. ಅದರೆಡೆ ರಸವೇ ಜನನ, ವಿರಸವೇ ಮರಣ ಸಮರಸವೇ ಜೀವನವೆನುತ ಗಾದೆಕಟ್ಟಿ ಬದುಕುವ ಮನಗಳು! ವಿರಸವಿಲ್ಲದ ಜೀವನವಿದೆಯೇ. ಪರರ ಮಾತನು ಒಪ್ಪಿ, ಅವರು ಹೇಳಿದಂತೆ ನಡೆದರೆ ವಿರಸ ಬರದು, ನೀವಾಗಿ ನೀವು ನಿಮ್ಮ ಯೋಚನೆ, ಆಲೋಚನೆಗಳನ್ನು ಅನುಷ್ಠಾನಗೊಳಿಸಲು ಸ್ವತಂತ್ರವಾಗಿ ಮುನ್ನುಗ್ಗಿದಿರೋ ಅಲ್ಲೇ ವಿರಸದ ಪ್ರಾರಂಭ!
ಬದುಕಿಗೊಂದು ಅರ್ಥ ಹುಡುಕದೆ ಸುಮ್ಮನೆ ಬದುಕಿದವನ ಬದುಕು ವ್ಯರ್ಥವೆಂದು ತಿಳಿದು ಅರ್ಥ ಹುಡುಕ ಹೋದವ ತಲೆಕೆಡಿಸಿಕೊಂಡು ತನ್ನ ಬದುಕಿನ ಸರ್ವ ನಲಿವುಗಳ ಕಳೆದುಕೊಂಡು ಯಾವ ಅರ್ಥವನ್ನೂ ಕಂಡುಕೊಳ್ಳಲಾಗದೆ ಮುಪ್ಪಡರಿ, ದೇಹ ರೋಗ ರುಜಿನಗಳಿಗೆ ತುತ್ತಾಗಿ ಕಡೆಗೊಂದು ದಿನ ಸರ್ವ ಜೀವಿಗಳಂತೆ ಅವನದೂ ಅವಸಾನವೇ ಆಗುವುದು.
ಈ ಜಗದಲಿ ಹುಟ್ಟು ಸಾವು ಸಾಧಾರಣ ಸಂಗತಿಗಳು. ಅದು ಜೀವಿಗಳಿಗೂ, ಮಾನವನಿಗೂ. ಜೀವಿಗಳು ಜೈವಿಕ ಕ್ರಿಯೆಗಳಾದ ಪಚನ, ಬೆಳವಣಿಗೆ, ಹಸಿವು, ನಿದ್ರೆ, ವಿಶ್ರಾಂತಿ, ವಂಶಾಭಿವೃದ್ಧಿ, ಚಲನೆ ಇವಿಷ್ಟಕ್ಕೆ ತಮ್ಮ ಬದುಕನ್ನು ಮುಡಿಪಾಗಿಸಿಕೊಂಡಿವೆ. ಆದರೆ ಮಾನವನೆಂಬ ಮೆದುಳು ಬೆಳೆದ ಜೀವಿ ತಾನು ತನಗೆ ದೊರೆತ ಶಕ್ತಿಯಿಂದ ಅದೇನನ್ನೋ ಮಾಡ ಹೋಗಿ, ಏನೇನೋ ಮಾಡಿ, ಕೊನೆಗೆ ಸಾಧನೆ ವಿಫಲವಾಯಿತೆನುತ ಮಾಡಿದ ಸಾಧನೆಯನ್ನೆಲ್ಲ ಮರೆತು ತಾನೇ ತನ್ನ ಜೀವನವನ್ನು ಕೊನೆಗೊಳಿಸುವನು, ಅಥವಾ ಬೇರೆ ಯಾರೋ ಅದಕ್ಕೆ ಕಾರಣರಾಗುವರು. ಕೆಲವು ಸಲ ವಿಧಿಯೇ ಕಾರಣವಾಗಲೂಬಹುದು.
ಪ್ರತಿ ಕ್ಷಣವೂ ಸತ್ಯ, ಸುಳ್ಳು, ನಂಬಿಕೆ, ಮೋಸ, ವಂಚನೆ, ನೋವು, ಅಹಂಕಾರ, ದುರಾಸೆ, ದಯೆ, ಕರುಣೆ, ಆನಂದ, ಕೋಪ, ರೌದ್ರ, ಭಯ, ಪ್ರೀತಿ, ಮೊದಲಾದ ಹಲವಾರು ಗುಣಗಳನ್ನು ಭಾವನೆಗಳ ಮೂಲಕ ವ್ಯಕ್ತಪಡಿಸುತ್ತಾ, ಅವುಗಳನ್ನೆ ಸದ್ಗುಣ, ದುರ್ಗುಣಗಳೆಂಬ ಎರಡು ಗುಂಪುಗಳೊಳಗೆ ತುರುಕುತ್ತಾ, ಧರ್ಮ-ಅಧರ್ಮಗಳೆಂಬ ಕಾರ್ಯ ಮಾಡುತ್ತಾ, ಮಾಡಬಾರದೆಂಬುದನ್ನು ಸರ್ವರಿಗೆ ಹೇಳುತ್ತಾ ತಾನದನ್ನೇ ಮಾಡುತ್ತಾ ಬದುಕುವ ಜೀವಿಗಳೇ ಮಾನವರು. ಇಲ್ಲಿ ದುರಾತ್ಮನೂ, ಧರ್ಮಾತ್ಮನೂ, ಹಠಮಾರಿಯೂ, ದುರಹಂಕಾರಿಯೂ, ಸದಾ ಹಸನ್ಮುಖಿಯೂ ಎಲ್ಲರೂ ಬಾಳಿಯೇ ಸಾಯುವರು!
ಉತ್ತಮನೆನಿಸಿಕೊಂಡವನಿಗೆ ಪರೀಕ್ಷೆ, ನೋವು, ಸಂಕಟ, ಹೋರಾಟಗಳೇ ಹೆಚ್ಚು. ಅಧರ್ಮಿಗೆ ಕ್ಷಮೆಗಳು ಸಿಗುವುದೇ ಹೆಚ್ಚು. ಅಹಂಕಾರಿಗೆ ಬೇಕಾದುದೆಲ್ಲ ಸಿಗುತ್ತದೆ! ವಿಲನ್ ಹೀರೋ ಆಗಬಲ್ಲ! ಹೀರೋ ವಿಲನ್ ಕೂಡಾ ಆಗಬಲ್ಲ!ಬದುಕೊಂದು ಕ್ಷಣಗಳ ಸಂತೆ. ಆ ಸಂತೆಯಲ್ಲಿ ನಮ್ಮ ವ್ಯಾಪಾರ ಎಂದು ಮುಗಿವುದೋ ತಿಳಿಯದು. ಎಲ್ಲರೂ ಅವರವರ ವ್ಯಾಪಾರದಲ್ಲಿ ತಲ್ಲೀನರು. ನಿನಗಾಗಿ ನೀ ಬದುಕು. ಪರರ ಗಮನ ನಿನಗೆ ಬೇಡ. ಹೋರಾಡಿ ಮಡಿಯುವವರೆಗೆ ಹೋರಾಡುತ್ತಾ ಬಾಳು. ಕೊನೆಗೊಂದು ದಿನ ಹೋಗಲೇ ಬೇಕಿದೆ. ಯಾರೂ ನಿನ್ನ ಜೊತೆಗೆ ಬರರು. ಮುಂದಿನ ಜನ್ಮದಲಿ ಏನಾಗುವುದೋ, ಹೇಗಿರುವುದೋ ಯಾರಿಗೆ ಗೊತ್ತು? ಈ ಜನುಮ ಸಿಕ್ಕಿದೆ ನಮಗೆ, ನಮ್ಮ ಮನಸ್ಸು ಹೇಳಿದಂತೆ ಮೂರು ಕ್ಷಣವಾದರೂ ಸಂತಸ, ನೆಮ್ಮದಿಯಿಂದ ಪರರ ಬದುಕಲು ಬಿಟ್ಟು, ಪ್ರೀತಿ ಹಂಚಿ ನಾವೂ ನೆಮ್ಮದಿಯಿಂದ ಸುಖವಾಗಿ ಬದುಕೋಣ. ಅಷ್ಟೆ ಸಾಕು. ನೀವೇನಂತೀರಿ?
@ಪ್ರೇಮ್@
01.09.2020
ಪ್ರೇಮಾ ಉದಯ್ ಕುಮಾರ್
ಸ.ಪ.ಪೂ.ಕಾಲೇಜು ಐವರ್ನಾಡು ಸುಳ್ಯ, ದ.ಕ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ