ಶುಕ್ರವಾರ, ಜನವರಿ 1, 2021

ಬಾಳೊಂದು ಉಯ್ಯಾಲೆ

ಬಾಳೊಂದು ಉಯ್ಯಾಲೆ

ಬಾಳ ದಾರಿ ಮೇಲೆ ಕೆಳಗೆ ಜೀಕುವಾಟವು
ಕಾಲ ಮೇಲೆ ನಿಂತ ಮೇಲೆ ಬಹಳ ನೋಟವು..
ಬಂದು ಹೋಗೋ ಕ್ಷಣದ ನಡುವೆ ನೋವು ನಲಿವಿನ ಕೂಟವು
ಮೂರು ದಿನದ ಬದುಕಿನಲ್ಲಿ ಸುಖ ದು:ಖಗಳ ಅಲೆದಾಟವು...

ಜೀಕುತಿಹುದು ಬಾಳ ದೋಣಿ ಅಲೆಯ ಮೇಲೆಯೇ
ಹಿಂದೆ ಮುಂದೆ ಮೇಲೆ ಕೆಳಗೆ ಭ್ರಮೆಯ ಹಾಗೆಯೇ
ಇಂದು ಇಲ್ಲಿ ನಾಳೆ ಎಲ್ಲೊ ಬಾಳಿನಾಸರೆ
ಹಿಂದು ಮುಂದು ತಿಳಿಯದಿಲ್ಲಿ ಯಾರಿಗಾರು ಕೈಸೆರೆ?

ಮೋಸ ದ್ವೇಷ ಆಕ್ರೋಶ ರೋಷ ಮನದ ಒಳಗಡೆ
ಪ್ರೀತಿ ನ್ಯಾಯ ಗುಣದ ಆಟ ಕಣ್ಣ ಹೊರಗಡೆ..
ಎದುರಿಗೊಂದು ಹಿಂದೆಯೊಂದು ಬಾಳಿನಾಟವು
ಆಲೋಚನೆಗಳ ಮೂಟೆ ಹೊತ್ತು ನಡೆವ ತೋಟವು..

ನೀನು ನಾನು ಯಾರು ಇಲ್ಲಿ ನಿತ್ಯ ನಿರಂತರ?
ಸತ್ಯ ಸುಳ್ಳಿಗಿಹುದು ಇಲ್ಲಿ ಭಾರೀ ಅಂತರ!
ಹತ್ತಿ ಇಳಿವ ಕಾರ್ಯ ಸಹಜ ಸಾಗೋ ದಾರೀಲಿ
ನೇರ ದಾರಿ ಸಿಗದೂ ಎಂದೂ ಹೋಗೋ ಪಥದಲಿ..

ಕಣ್ಣೀರ ಹರಿಸದೇನೆ ಇಲ್ಲಿ
ದಿನವು ನಡೆಯದು
ಮಣ್ಣನ್ನು ಸೇರೊವರೆಗೆ ಮನಕೆ ಕಷ್ಟ ತಪ್ಪದು
ಬಾ ಹೋಗು ಎನುತ ಯಾರೂ ಹೇಳಲೊಲ್ಲರು
ಬಾಯಿ ಮುಚ್ಚಿ ಬದುಕೊ ಪಾಠ ಕೇಳಲೊಲ್ಲರು..
@ಪ್ರೇಮ್@
02.12.2020

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ