ಶುಕ್ರವಾರ, ಜನವರಿ 1, 2021

ರವಿಮಾಮ ಬಂದ

ರವಿಮಾಮ ಬಂದ
(ಶಿಶುಗೀತೆ)

ಬಂದನು ಭೂಮಿಗೆ ರವಿಮಾಮ
ತಂದನು  ಬೆಳಕನು ರವಿಮಾಮ
ಕಿರಣವ ಬೀರುತ ಪೂರ್ವದಿ ನಿಂತನು
ಚರಣದಿ ನಿಂತು ನೋಡುತ ನಕ್ಕನು..

 ಬೆಳಕನು ಬೀರುತ ಹಸಿರಿಗೆ ತಾನು
ಕೊಳಕನು ತೆಗೆಯಲು ಹೇಳಿದ ಭಾನು..

ಗಿಡಮರ ಉಸಿರಾಡಿ ಸಂತಸಪಟ್ಟವು
ಹಕ್ಕಿಗಳೆದ್ದು ಚಿಲಿಪಿಲಿಯೆಂದವು..

ಜನರೆಲ್ಲ ಎದ್ದು ಬೆಳಗಾಯಿತೆಂದರು
ಹಲ್ಲನು ಉಜ್ಜಿ ಕೆಲಸಕೆ ನಿಂತರು

ಮೋಡವು ಓಡಿತು ಗಗನದ ಕಡೆಗೆ
ಗಾಳಿಯು ಬೀಸಿತು ಮರಗಳ ಬಳಿಗೆ

ಪ್ರಾಣಿಗಳೆಲ್ಲ ಖುಷಿಯಲಿ ಕುಣಿದವು
ಹಕ್ಕಿಗಳೆಲ್ಲ ಆಹಾರಕೆ ಹಾರಿದವು..

ಬಿಸಿಲದು ಬರಲು ಕುರಿ-ದನ ಮೇಯಲು
ಕುರಿಗಾಹಿ ನೆರಳಲಿ ನಿದ್ದೆಯ ಮಾಡಲು

ಮಕ್ಕಳು ಆಟದ ಬಯಲಿಗೆ ಓಡಲು
ಕುಣಿಯುತ ಲಗೋರಿ ಚೆಂಡಾಟವಾಡಲು

ಸೂರ್ಯನು ನಕ್ಕನು ನೆತ್ತಿಗೆ ಬರುತಲಿ
ಮಕ್ಕಳು ಮನೆಕಡೆ ಊಟಕೆ ಓಡುತಲಿ..
@ಪ್ರೇಮ್@
26.11.2020

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ