ಲಘು ಪ್ರಬಂಧ- ಹೆಸರಿನೊಳಗೇನಿದೆ?
ನಾನು ಏಳನೇ ತರಗತಿಯಲ್ಲಿರುವಾಗ ನನ್ನ ಗೆಳತಿಯೊಬ್ಬಳು ನನಗೆ ಒಗಟೊಂದನ್ನು ಹೇಳಿದ್ದಳು. ಅದು ನನಗಿನ್ನೂ ಮರೆತಿಲ್ಲ. ಎಲ್ಲಾದಕ್ಕೂ ಬೇಕು ಏನದು? ಎಂದು. ಗಾಳಿ ಅಂದಾಗ ಗಾಳಿಗೂ ಬೇಕು, ನೀರು ಅಂದಾಗ ನೀರಿಗೂ ಬೇಕು, ಊಟವೆಂದಾಗ ಊಟಕ್ಕೂ ಬೇಕೆಂದು ನನ್ನ ತಲೆ ತಿಂದು ಕೊನೆಗೆ ನಾನು ಸೋತು ಅವಳಿಗೆ ನೀನೇ ಹೇಳೆನುವಾಗ ಬಹು ಸುಲಭದಿ "ಹೆಸರು" ಎನುತ ಓಡಲು ಬೆಪ್ಪಾಗುವ ಸರದಿ ನನ್ನದೇ!
ತದನಂತರ ನಾನು ಬೆಪ್ಪಾದುದು ಹಲವಾರು ಭಾರಿ! ನನ್ನ ತಂದೆ ಆಸ್ತಿ-ಪಾಸ್ತಿ , ಇರದಿದ್ದರೂ ಅವರ ಅಪ್ಪ ಅಮ್ಮನ (ನನ್ನ ಅಜ್ಜಿ-ಅಜ್ಜನ ಎಂದು ಬೇರೆ ಹೇಳ ಬೇಕಾಗಿಲ್ಲ ತಾನೇ?) ಏಳು ಮಕ್ಕಳು ಸತ್ತು ಉಳಿದ ಒಬ್ಬರೇ ಕಡೆಯ ಮುದ್ದಿನ ಮಗ! ಅದೂ ಆಗಿನ ನಂಬಿಕೆಯಂತೆ ಮಕ್ಕಳು ಬದುಕದಿದ್ದರೆ ಕೊರಗರಿಗೆ ಮಗುವನ್ನು ದಾನ ಮಾಡುವುದು. ತದನಂತರ ಅವರು ಹೇಳಿದ ಹಣ ಕೊಟ್ಟು ವಾಪಸ್ ತಮ್ಮದೇ ಮಗುವನ್ನು ವಾಪಸ್ ಪಡೆದುಕೊಳ್ಳುವುದು. ಆಗಿನ್ನೂ ಮೋಸ, ವಂಚನ, ಭ್ರಷ್ಟಾಚಾರ, ಅನ್ಯಾಯ, ಹಣ, ದುರಾಸೆಗಳಿಲ್ಲದ, ಜನ ಸತ್ಯವಂತರು, ಅಲ್ಪ ವಿದ್ಯಾವಂತರಾಗಿದ್ದರೂ ಉತ್ತಮ ಗುಣವಂತರಾಗಿದ್ದ ಸ್ವಾತಂತ್ರ್ಯ ಬಂದು ಐದಾರು ವರುಷಗಳಾಗಿತ್ತೋ ಏನೋ. 1950-55ರ ಕಾಲ. ಒಂದೆಷ್ಟು ದುಡ್ಡು ಕೊಟ್ಟು ಮಗುವನ್ನು ಹಿಂಪಡೆಯುವಾಗ ಅವರು 'ಕೊರಗ' ಎಂದು ಹೆಸರಿಟ್ಟರು. ಮಗುವನ್ನು ಪಡೆದ ಸಂತಸದಲ್ಲಿ ಮನೆಯಲ್ಲಿ ಪೋಷಕರು 'ರಮೇಶ' ಎಂದು ಕರೆದರು. ರಾಮ ಭಕ್ತರಾಗಿದ್ದ ಅಜ್ಜ 'ರಾಮ' ಎಂದು ಕರೆದರು. ಹೀಗೆ ಸೀತೆಗೆ ಭೂಮಿಜ, ಜಾನಕಿ, ಮೈಥಿಲಿ, ಪವನಜ…ಹೀಗೆ ಹಲವಾರು ಹೆಸರಿರುವಂತೆ ನನ್ನ ತಂದೆಗೂ ಮೂರು ಹೆಸರು. ಊರಿನಲ್ಲಿ, ಸಂಬಂಧಿಕರು ಬೇರೆ ಬೇರೆ ಹೆಸರಿನಿಂದ ಕರೆಯುತ್ತಿದ್ದರು. ಆಗಿನ್ನು ಆಧಾರ್ ಕಾರ್ಡ್ ಇರಲಿಲ್ಲ. ಸೊಸೈಟಿಯಲ್ಲಿ ಉಚಿತ ರೇಶನ್ ಪಡೆಯಲು ರೇಷನ್ ಕಾರ್ಡ್ ಸಾಕಾಗುತ್ತಿತ್ತು. ಹಾಗೆ ಮೊದಲನೆಯ ಹೆಸರನ್ನೆ ಅಲ್ಲಿ ನಮೂದಿಸಲಾಗಿತ್ತು. ಆದಾಯ ಪ್ರಮಾಣ ಪತ್ರಕ್ಕೂ, ನನ್ನ ತಂಗಿ , ತಮ್ಮನ ಶಾಲೆಯಲ್ಲೂ ಮೊದಲ ಹೆಸರನ್ನೇ ಕೊಟ್ಟು ಸೇರಿಸಲಾಗಿತ್ತು. ನಾನು ಅವಿಭಜಿತ ದಕ್ಷಿಣ ಕನ್ನಡ ಈಗಿನ ಉಡುಪಿ ಜಿಲ್ಲೆಯಲ್ಲಿ ಅಜ್ಜಿ ಮನೇಲಿ ಬೆಳೆದ ಕಾರಣ ಅಲ್ಲಿ ನನ್ನ ಅತ್ತೆ ನನ್ನನ್ನು ಶಾಲೆಗೆ ಸೇರಿಸುವಾಗ ಮದುವೆ ಕರೆಯೋಲೆಯಲ್ಲಿದ್ದ ಎರಡನೆ ಹೆಸರಿನೊಡನೆ ಸೇರಿಸಿದರು. ಅಲ್ಲಿಗೆ ನಾನು ತಗಲಾಕ್ಕೊಂಡೆ ನೋಡಿ!
ಜಾತಿ, ಆದಾಯ ಪ್ರಮಾಣ ಪತ್ರದಲ್ಲಿ ತಂದೆಯ ಹೆಸರು ಬೇರೆ, ಶಾಲೆಯಲ್ಲಿ ಬೇರೆ! ದಾಖಲೆಯಲ್ಲಿ ತಮ್ಮ-ತಂಗಿಯ ತಂದೆಯ ಹೆಸರು ಬೇರೆ, ನನ್ನ ತಂದೆಯ ಹೆಸರ ಬೇರೆ !!! ನಾನು ಕಲಿಕೆಯಲ್ಲಿ ಎಷ್ಟೇ ಮುಂದಿದ್ದರೂ ನನಗೆ ಸ್ಕಾಲರ್ಶಿಪ್ ಗಳು ಮಿಸ್ಸಾದವು! ಕಾಲೇಜಿಗೆ ಸೇರುವಾಗಲೂ ಸಮಸ್ಯೆಯಾಗಿ ನೋಟರಿ ಬಳಿ ಆ ಎರಡು ಹೆಸರುಗಳ ಜನ ಒಂದೇ ಎಂದು ಸ್ಟಾಂಪ್ ಪೇಪರ್ ಮೇಲೆ ಬರೆದು ಸಾಬೀತು ಮಾಡಲಾಯ್ತು! ತದನಂತರ ಡಿ.ಎಡ್ ಸೀಟಿ ಗೆ ಹೋಗುವಾಗಲೂ ಪರದಾಟ. ನನ್ನ ತಂದೆ ಒಬ್ಬರೇ ಎಂದು ಹೆಸರಿನಿಂದಾಗಿ ನಾನು ಸಾಬೀತು ಪಡಿಸಬೇಕಾಯ್ತು!! ಏನೂ ತಿಳಿಯದ ಅಪ್ಪನಿಗೆ, ಪೆನ್ನು ಹಿಡಿದು ಒಂದಕ್ಷರ ಬರೆಯಲೂ ಬಾರದು. ಮುದ್ದಿನಿಂದ ಬೆಳೆಸಿದ ಕಾರಣ ಮೊದ್ದಾಗಿದ್ದರು! ತದ ನಂತರ ನನಗೆ ಜಾತಿಯ ಆಧಾರದ ಮೇಲೆ ಕೆಲಸ ದೊರೆತಾಗಲೂ ಮತ್ತೆ ಸಮಸ್ಯೆ ಎದುರಾಯ್ತು. ಅದಕ್ಕೆಲ್ಲ ನನ್ನ ಜೀವನದಲ್ಲಿ ನಾನು ಆಗ ಪಟ್ಟ ಕಷ್ಟ, ವ್ಯಯಿಸಿದ ಸಮಯ ನನಗೇ ಗೊತ್ತು!
ಮತ್ತೆ ನನ್ನ ಜೀವನದಲ್ಲಿ ಹೆಸರಿನ ಕಷ್ಟ ಅಲ್ಲಿಗೇ ಸೀಮಿತವೆಂದು ತಿಳಿದಿರಾ? ಊಹ್ಞೂ..ನನ್ನ ಹೆಸರು! ಅಪ್ಪನೋ, ಅಮ್ಮನೋ, ಸಂಬಂಧಿಕರೋ(ಇಂದಿಗೂ ತಿಳಿಯದು) 'ಪ್ರೇಮಾ' ಎನ್ನುವ ಎರಡಕ್ಷರದ ಮುದ್ದಾದ, ಪ್ರೀತಿಯ, ಅಂದದ, ಅರ್ಥಗರ್ಭಿತ ಹೆಸರಿಟ್ಟರು. ಸಂತೋಷ. ಶಾಲೆಗೂ ಅದೇ ಹೆಸರು ಕೊಟ್ಟರು. ಹೈಸ್ಕೂಲಿಗೆ ಅಡ್ಮಿಷನ್ ಮಾಡಿಕೊಂಡ ಧಾರವಾಡದ ಮೇಡಮ್ ಒಬ್ಬರು 'ಸೆಕೆಂಡ್ ನೇಮ್ ಬೇಕಲ್ಲಾ' ಎಂದು ನನ್ನ ಹೆಸರಿನ ಮುಂದೆ ನನ್ನ ಜಾತಿಯ ಹೆಸರು ಸೇರಿಸಿದರು! ನನ್ನ ಹೆಸರು ಹಾಜರಿಯಲ್ಲಿ ಬದಲಾಯಿತು! ಮತ್ತೊಬ್ಬರು ಅಧ್ಯಾಪಕರು ದಾಖಲೆಯಲ್ಲಿ ಹಾಗಿಲ್ಲವೆಂದು ಜಾತಿಯ ಹೆಸರು ತೆಗೆದು ಬಿಟ್ಟರು! ಈಗ ಮೊದಲಿನ , ಯಾವುದೇ ಇನಿಶಿಯಲ್ ಗಳು ಇಲ್ಲದ 'ಪ್ರೇಮಾ' ಹೆಸರೇ ಉಳಿದುಕೊಂಡಿತು!
ಶಿಕ್ಷಕ ಶಿಕ್ಷಣ ತರಬೇತಿ ಪಡೆಯಲು ಮೈಸೂರಿಗೆ ಹೋದಾಗ ನನ್ನ ಹೆಸರಿನವಳೇ ನನಗೆ ಗೆಳತಿಯಾಗಿ ನನ್ನೊಡನೆ ಸಿಕ್ಕಳು. ಅವಳಿಗೆ ಬಿ.ಎಸ್. ಎನ್ನುವ ಇನಿಶಿಯಲ್ ಇದ್ದ ಕಾರಣ ಎಲ್ಲರೂ ಇನಿಶಿಯಲ್ಸ್ ಇಲ್ಲದ ನನ್ನ 'ಖಾಲಿ ಪ್ರೇಮಾ' ಎನ್ನ ತೊಡಗಿದರು! ಅದೂ ಇರಲೆಂದು ಸುಮ್ಮನಾದರೆ ಮಹಾರಾಣಿ ಕಾಲೇಜಿನ ಹಲ ಗೆಳತಿಯರು ನಾನು ಕುದುರೆಮುಖ ಎಂಬ ಊರಿನಿಂದ ಹೋಗಿದ್ದೆನಾದ ಕಾರಣ "ಕುದುರೆಮುಖ ಪ್ರೇಮಾ" ಎಂದರೆ ತುಳು ಮಾತನಾಡುತ್ತಿದ್ದ ಗುಂಪಿನಲ್ಲಿ ನಾನಿದ್ದದ್ದು ನೋಡಿ "ಮಂಗ್ಳೂರ್ ಪ್ರೇಮಾ".ಎಂದು ಕೂಡಾ ನಾಮಕರಣ ಮಾಡಿದರು! ಅಲ್ಲಿದ್ದ ಕೆಲವರು ಚಿಕ್ ಮಂಗ್ಳೂರಾ, ದೊಡ್ ಮಂಗ್ಳೂರಾ ಎಂದೂ ಕೇಳಿದರು! ಅಜ್ಜಿ ಮನೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿತ್ತು, ತಂದೆ-ತಾಯಿ ಚಿಕ್ಕಮಗಳೂರು ಜಿಲ್ಲೆಗೆ ಸೇರಿದ ಕುದುರೆಮುಖದಲ್ಲಿದ್ದರು. ಗೆಳತಿಯರು ಮಂಗ್ಳೂರನ್ನು ನನ್ನ ಹೆಸರಿಗೆ ಕಟ್ಟಿಬಿಟ್ಟಿದ್ದರು! ನಾನು ಯಾವ ಮಂಗ್ಳೂರಿನವಳೆಂದು ಹೇಳಲೆಂಬ ಗೊಂದಲದ ಗೂಡಾಗಿಬಿಟ್ಟಿದ್ದೆ!
ಅಷ್ಟಕ್ಕೇ ಹೆಸರಿನ ರಂಪ ಮುಗಿಯಿತೆಂದುಕೊಂಡಿರಾ? ನೋ..ತರಬೇತಿಯ ಬಳಿಕ ಬಂಟ್ವಾಳ ತಾಲೂಕಿನ ಮೂಲೆಯ, ಕಟ್ಟ ಕಡೆಯ ಹಳ್ಳಿಯಾದ ಉಳಿಬೈಲು ಶಾಲೆಯಲ್ಲಿ ನನಗೆ ಕಲಸ ಸಿಕ್ಕಿತು. ಅಲ್ಲಿ ನಾನು 'ನಮ್ಮ ಬಂಟ್ವಾಳ' ವಾರಪತ್ರಿಕೆಗೆ "ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ" ಎಂಬ ಅಂಕಣ ಬರಹವನ್ನು ಪ್ರಾರಂಭಿಸಿದೆ. ಲೋಕಲ್ ಪತ್ರಿಕೆ ಆದ ಕಾರಣ (ಆಗಿನ್ನೂ ಆನ್ ಲೈನ್ ಪತ್ರಿಕೆಯಾಗಿರಲಿಲ್ಲ ಅದು) ನನ್ನ ಹೆಸರನ್ನವರು 'ಪ್ರೇಮಾ ಉಳಿಬೈಲು' ಎಂದು ಮುದ್ರಿಸತೊಡಗಿದರು! ನನ್ನ ಮರುನಾಮಕರಣವೂ ಆಯ್ತು. ಸಹೃದಯ ಓದುಗರು ನನ್ನ ಬರಹವನ್ನಂತೂ ಮೆಚ್ಚಿದರು! ಕುವೆಂಪುರವರ ಅಡಿದಾವರೆಗಳಿಗೆ ವಂದಿಸುತ್ತಾ ಅವರು ಹೇಳಿದ ಮಾತು 'ಹೆಸರೊಳೇನಿದೆ? ಮೊಲ್ಲೆಯ ಹೂವನು ಕಳ್ಳಿಯ ಹೂವೆನಲು ಅದರ ಕಂಪೇನು ಮಾಸಿ ಹೋಗುವುದೇ?' ಅಂತ ಸುಮ್ಮನಿದ್ದೆ!
ಹೆಸರಿನ ರಾಮಾಯಣವಿದು! ಮುಗಿಯದು ಮತ್ತೂ.. ಭಡ್ತಿಗೊಂಡು ಸುಳ್ಯ ತಾಲೂಕಿನ ಐವರ್ನಾಡಿನ ಸ.ಪ.ಪೂ.ಕಾಲೇಜಿಗೆ ಬಂದ ಬಳಿಕ ಎಲ್ಲಾ ಗೆಳತಿಯರು "ಸುಳ್ಯದ ಪ್ರೇಮ" ಎನ್ನಲು ಪ್ರಾರಂಭಿಸಬೇಕೇ? ಅಜ್ಜಿ ಹೇಳಿದ್ದ ಗಾದೆ ಮಾತು ನೆನಪಾಯಿತು! "ಮನುಷ್ಯ ಹೋದೆಡೆ, ಮರ ಹುಟ್ಟಿದೆಡೆ".ಅಂತ! ಹೆಸರಿನೊಂದಿಗೆ ಕಾಲೇಜು ವಿಳಾಸ ಕಳಿಸಿದಾಗೆಲ್ಲಾ ನನ್ನ ಹೆಸರು 'ಪ್ರೇಮಾ ಐವರ್ನಾಡು' ಎಂದು ಬದಲಾಯ್ತು! ನಿಮಗೆ ತಲೆ ಚಿಟ್ಟು ಹಿಡಿದು ಹೋಯ್ತಾ?
ಹೆಣ್ಣಿನ ಬಾಳಲ್ಲಿ ಮತ್ತೂ ಬದಲಾವಣೆ ಆಗುತ್ತಲೇ ಇರುತ್ತದೆ!ಹುಟ್ಟಿದ ಮನೆ ಬಿಟ್ಟು ಗಂಡನ ಮನೆ, ಗಂಡನ ಊರು ಸೇರುವ ಮಹತ್ವದ ಕಾಲಘಟ್ಟ! ಹೌದು ನನ್ನ ಪಾಲಿಗೂ ಅದಿರುವುದಲ್ಲವೇ? ಉದಯ್ ಕುಮಾರ್ ಅವರನ್ನು ಮದುವೆಯಾದ ಬಳಿಕ ನನ್ನ ಹೆಸರು "ಪ್ರೇಮಾ ಉದಯ್ ಕುಮಾರ್" ಎಂದು ಮರುನಾಮಕರಣಗೊಂಡಿತು! ಅದು ವಿಳಾಸ ಸಮೇತ ಬೇರೆ ಬೇರೆ ಜಿಲ್ಲೆಗಳಿಗೆ ಬರವಣಿಗೆ ಮೂಲಕ ತಲುಪಿದಾಗ ಪ್ರೇಮಾ ಉದಯ್ ಕುಮಾರ್ ಸುಳ್ಯ, ಪ್ರೇಮಾ ಉದಯ್ ಕುಮಾರ್ ಐವರ್ನಾಡು ಹೀಗೆ ಮಾರ್ಪಟ್ಟಿತು!
ನನ್ನ ಮೊದಲ ಪುಸ್ತಕ ಪ್ರಕಟಣೆಗೆ ಅನುವು ಮಾಡಿ ಕೊಟ್ಟವರು ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷರಾದ ಅಶೋಕ್ ಕುಂದೂರು ಸರ್ ಅವರು. ಅಲ್ಲಿ ಪುಸ್ತಕ ಬಿಡುಗಡೆ ಆದ ಕಾರಣ ಅಲ್ಲಿನ ಆಮಂತ್ರಣ ಪತ್ರಿಕೆಯಲ್ಲಿ ನನ್ನ ಗಂಡನ ಮನೆಯ ಹೆಸರು ಹೀಗೆ ದಾಖಲಾಗಿ ನನ್ನೊಡನೆ ಸೇರಿ ಹೋಗಿತ್ತು.'ಪ್ರೇಮಾ ಉದಯ್ ಕುಮಾರ್ ದೇವನ್ ಗೂಲ್, ಕೊಟ್ಟಿಗೆಹಾರ" ಅಬ್ಬಾ..ಒಂದೇ ವ್ಯಕ್ತಿಗೆ ಪ್ರಪಂಚದಲ್ಲಿ ಅದೆಷ್ಟು ಹೆಸರುಗಳು!
ಇದ್ಯಾವುದರ ರಗಳೆಯೇ ಬೇಡವೆಂದು ನನ್ನ ಕಾವ್ಯನಾಮವನ್ನು ಬದಲಾಯಿಸಿ ಬಿಟ್ಟೆ! ಪ್ರೇಮಾ ಎಂಬ ಹೆಸರಿಗೆ ನ್ಯೂಮರಾಲಜಿ ಪ್ರಕಾರ ಕಷ್ಟ ಜಾಸ್ತಿ ಇದೆಯೆಂದು ಅರಿತ ಬಳಿಕ ಪ್ರೇಮ್ ಸರಿಯಾಗಿದೆಯೆಂದು ಅದೇ ಹೆಸರಿನಲ್ಲಿ ಬರೆಯತೊಡಗಿದೆ! ಅಲ್ಲಿ ಸರ್ವರಿಗೂ ನನ್ನ ಬಗ್ಗೆ ಕನ್ಫ್ಯೂಝನ್. ನಾನೇನೋ ಗೊತ್ತಿಲ್ಲದ ನಂಬರ್ ನಿಂದ ಕಾಲ್ ಬಂದರೆ ಸೇಫ್ಟಿಗೂ ಆಗುವುದೆಂದು ಖುಷಿಪಟ್ಟೆ! ನಂತರ ನಾನು 'ಪ್ರೇಮ್ ಸರ್' ಆಗಿಬಿಟ್ಟೆ!!!
ನನ್ನ ನಂಬರಿಗೇ ಫೋನ್ ಮಾಡಿ "ಮೇಡಮ್, ಫೋನ್ ಪ್ರೇಮ್ ಸರ್ ಗೆ ಕೊಡಿ, ಮಾತಾಡ್ಬೇಕು" ಅಂದವರೆಷ್ಟೋ ಜನ!! ವಿವರಿಸಿ ಒಬ್ಬೊಬ್ಬರಿಗೇ 'ಸರ್' ಅಲ್ಲ 'ಮೇಡಂ' ಎಂದು ತಿಳಿ ಹೇಳುವಷ್ಟರಲ್ಲಿ ಸಾಕೋ ಸಾಕಾಗಿ ಬಿಟ್ಟಿತು! ಇದೀಗ ಮತ್ತೆ ಸೆಕೆಂಡ್ ನೇಮ್ ಅವಾಂತರ. ಹಾಸನವಾಣಿ ಪತ್ರಿಕೆಗೆ ನಾನು ಬರೆಯುವ ಪ್ರತಿ ಭಾನುವಾರದ ಅಂಕಣ "ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ" ಯಲ್ಲಿ ನನ್ನ ನಾಮಧೇಯ "ಪ್ರೇಮ್ ಸುಳ್ಯ"!!!!!!!!! ಈಗಿಷ್ಟೇ ಸಾಕಲ್ವೇ? ಓದಿ ರಾಮಾಯಣ ಓದಿದ ಅನುಭವ ಆಗಲಿಲ್ವೇ? ಏನಂತೀರಿ???
@ಪ್ರೇಮ್@
ಪ್ರೇಮಾ ಉದಯ್ ಕುಮಾರ್
ಸಹ ಶಿಕ್ಷಕರು
ಸ.ಪ.ಪೂ.ಕಾಲೇಜು ಐವರ್ನಾಡು ಸುಳ್ಯ
ದ.ಕ 574239
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ