ಶುಕ್ರವಾರ, ಜನವರಿ 1, 2021

ಭರ್ಜರಿ ಬೇಟೆ

ಭರ್ಜರಿ ಬೇಟೆ(ಕಥನ ಕವನ)

 ಬಿಲದಲಿದ್ದ ಬಡವ ಇಲಿಗೆ ಹಸಿಯುತ್ತಿದ್ದಿತು
ಹಲವು ದಿನಗಳಿಂದ ಊಟ ಹುಡುಕುತಿದ್ದಿತು
ಕೆಲವು ಕ್ಷಣದ ಅಸೌಖ್ಯದಿಂದ ಮರುಗುತಿದ್ದಿತು
ಬಲವೆ ಇಲ್ಲದೇನೆ ಬಿಲದಿ ಮಲಗಿಬಿಟ್ಟಿತು.

ಹಸಿವು ತಡೆಯದೇನೆ ಮನೆಯ ಬಿಟ್ಟುಬಿಟ್ಟಿತು
ಊಟ ಹುಡುಕಿ ಹೊರಗೆ ತಾನು ಹೊರಟುಬಿಟ್ಟಿತು
ದಾರಿಯಲ್ಲಿ ಸಿಂಹವೊಂದು ಬಲೆಯೊಳಗೆ ಬಿದ್ದಿತು
ಹಸಿದ ಇಲಿಯ ನೋಡಿ ತಾನು ಕರೆದು ಬಿಟ್ಟಿತು

ಬೇಟೆ ನಾನು ಇವನ ಕೈಗೆ ಸಿಕ್ಕಿ ಬಿದ್ದೆನು
ಎನುತ ಇಲಿಯು ವೇಗದಲ್ಲಿ ಓಡ ಹತ್ತಿತು
ಮೃಗದ ರಾಜ ಜೋರಿನಲ್ಲಿ ಘರ್ಜಿಸಿ ಬಿಟ್ಟಿತು
ಹೆದರಿ ಹೋದ ಇಲಿಯು ಆಗ ಅಲ್ಲೆ ನಿಂತಿತು

ಬಲೆಯಿಂದೆನ್ನ ಬಿಡಿಸುವಂತೆ ಕೇಳಿಕೊಂಡಿತು
ಆಯಿತೆಂದು ಗಣಪ ವಾಹನ ಒಪ್ಪಿಕೊಂಡಿತು
ಹಲ್ಲಿನಲ್ಲಿ ಬಲೆಯ ಕಚ್ಚಿ ತುಂಡು ಮಾಡಿತು
ಸಿಂಹವನ್ನು ಬಲೆಯ ಒಳಗಿನಿಂದ ಬಿಡಿಸಿತು

ಸಣ್ಣ ಪ್ರಾಣಿಯೆನುತ ಸಿಂಹ ಬಿಟ್ಟುಬಿಟ್ಟಿತು
ಜೀವವುಳಿತೆಂದು ಮನದಿ ಹಿಗ್ಗಿ ಓಡಿತು
ಮುಂದೆ ಸಾಗೆ ದಾರಿಯಲ್ಲಿ ಮಾಂಸ ಸಿಕ್ಕಿತು
ಭರ್ಜರಿಯಾಗಿ ತಿಂದು ಮನೆಗೆ ಬಂದು ಮಲಗಿತು

ಬಲೆಯ ಹಾಕಿದವನ ಸಿಂಹ ಕಾದು ಕುಳಿತಿತು
ಬೇಟೆಯಾಡಿ ಕೊಂದು ಹಾಕಿ ಸೇಡು ಪಡೆಯಿತು
ಮುಂದೆ ತನ್ನ ಆಹಾರವ ತಿಂದು ಮೆರೆಯಿತು
ಭರ್ಜರಿಯ ಬೇಟೆಯಾಡಿ ಖುಷಿಯಪಟ್ಟಿತು.
@ಪ್ರೇಮ್@
02.12.2020

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ