ಶುಕ್ರವಾರ, ಜನವರಿ 1, 2021

ಮೀಸಲಾತಿ ಇನ್ನೂ ಬೇಕೇ



ಮೀಸಲಾತಿ ಇನ್ನೂ ಬೇಕೇ?

   ಭಾರತವಿನ್ನೂ ಮುಂದುವರೆದಿಲ್ಲ, ಮುಂದುವರೆಯುತ್ತಿದೆ ಅಷ್ಟೆ. ಹಾಗಾಗಿ ಇಲ್ಲಿ ಬಹು ದೊಡ್ಡ ಕಂದಕ ಬಡವ ಸಿರಿವಂತರದ್ದು. ಅದರೊಡನೆ ಹಳ್ಳಿಗರು ಮತ್ತು ನಗರವಾಸಿಗಳದ್ದು. ನಗರವಾಸಿಗಳಿಗೆ ವಿದ್ಯೆಯ ಮಹತ್ವ ತಿಳಿದಿದೆ, ಹಲವಾರು ಕಲಿಕೆಗೆ ಅವಕಾಶವಿದೆ, ಇತರರಿಂದ ಸಹಾಯವೂ ಸಿಗುತ್ತದೆ. 
    ಆದರೆ  ಹಳ್ಳಿಯ ಬಡ ಕೂಲಿ ಕಾರ್ಮಿಕರ ಹಲವಾರು ಮಕ್ಕಳಿಗೆ ಉನ್ನತ ಶಿಕ್ಷಣದ ಬಗ್ಗೆ, ಅದರ ಉಪಯೋಗದ ಬಗ್ಗೆ ತಿಳುವಳಿಕೆ ಇಲ್ಲ. ಕೆಎಎಸ್,  ಐಎಎಸ್ ಪರೀಕ್ಷೆಗಳ ರ್ಯಾಂಕ್ ವಿಜೇತರ ಪಟ್ಟಿಯಲ್ಲಿ ಕಾಣ ಸಿಗುವುದು ಹಳ್ಳಿಯ ಒಂದೆರಡು ತುಂಬಾ ಕಷ್ಟ ಪಟ್ಟ ಪ್ರತಿಭೆಗಳು ಮಾತ್ರ. ಹಾಗೆಯೇ ಮೆಡಿಕಲ್, ಇಂಜಿನಿಯರಿಂಗ್ ಕಾಲೇಜುಗಳು ನಾಯಿಕೊಡೆಯಂತೆ ತಲೆಯೆತ್ತಿ ನಿಂತಿದ್ದರೂ ಪ್ರತಿ ಹಳ್ಳಿಗಳಲ್ಲೂ ವೈದ್ಯರಿರುವರೇ? ಆ ಕಾಲೇಜುಗಳಲ್ಲೂ ಬೆರಳೆಣಿಕೆಯ ಹಳ್ಳಿಗರು ಮ ಾತ್ರ ಇರುತ್ತಾರೆ. 
  ಇವನ್ನೆಲ್ಲ ಗಮನಿಸಿದಾಗ ರೂರಲ್ ಕೋಟಾ ಅಥವಾ ಗ್ರಾಮೀಣ ಅಭ್ಯರ್ಥಿಗಳಿಗೆ ಮೀಸಲಾತಿ ಬೇಡವೇ? ತಂದೆ-ತಾಯಿ ಇಬ್ಬರೂ ಅನಕ್ಷರಸ್ಥರಾಗಿದ್ದು ಹಗಲಿಡೀ ದುಡಿದು ಸಂಜೆ ಕುಡಿದು ಜಗಳವಾಡುವ ಸಮಯದಲ್ಲೂ ಬಡತನವ ಮೆಟ್ಟಿ ತಾನೇ ಪರೀಕ್ಷೆಗೆ ಓದಿ ಬರೆದ ಮಗುವಿಗೂ, ಲಕ್ಷಗಟ್ಟಲೆ ಟ್ಯುಟೋರಿಯಲ್ ಕಾಲೇಜಿಗೂ,  ಖಾಸಗಿ ಶಾಲೆಗೂ ಸುರಿದು ಕಲಿತ ಮಗುವಿಗೂ ವ್ಯತ್ಯಾಸವಿಲ್ಲವೇ? ಆ ಕಷ್ಟಪಟ್ಟ ಕಂದನಿಗೂ ಅವಕಾಶ ಸಿಗಬಾರದೇ?

 ಹೇಳಿ ಕೇಳಿ ಭಾರತ ಜಾತ್ಯಾತೀತ ರಾಷ್ಟ್ರ. ಜನರು ಜಾತಿ ಮರೆತು ಅಂತರ್ಜಾತಿ ವಿವಾಹಗಳಾಗುತ್ತಿದ್ದರೂ ಆಡಳಿತದ ಚುಕ್ಕಾಣಿ ಹೊತ್ತವರೇ ಓಟಿಗಾಗಿ, ಕಛೇರಿ ಕಡತಗಳಿಗಾಗಿ, ಮಗುವೊಂದು ಶಾಲೆಗೆ ಸೇರುವಾಗಲೂ ಜಾತಿ ಆದಾಯ ಪ್ರಮಾಣ ಪತ್ರ ಸಲ್ಲಿಸಲೇ ಬೇಕು. ಹಾಗಿರುವಾಗ  ತೆಲವೊಂದು ಜಾತಿಗೆ ಇಂತಿಷ್ಟು  ವಿನಾಯಿತಿ ಕೊಡದೆ ಹೋದರೆ ತಪ್ಪಾದೀತು. ಆ ದಿಸೆಯಲ್ಲಾದರೂ  ಹಳ್ಳಿಯ ಬಡ ಮಗುವಿಗೆ ಅವಕಾಶ ಸಿಕ್ಕೀತಲ್ಲವೇ?

ಲಂಚವೇ ಮುಖ್ಯವಾದ ಕಸುಬಾದ ಭಾರತದಲ್ಲಿ ವಿನಾಯಿತಿಗಳಿರದಿದ್ದರೆ ಸಿರಿವಂತ ಜನ ದುಡ್ಡಿನಿಂದ ಅಂಕಗಳನ್ನು ಪಡೆದು ತಾವೇ ಮೆರೆಯುವುದಿಲ್ಲವೇ? ಆಗ ಬಡವರಿಗೆ ಅವಕಾಶ ಸಿಗುವುದೇ?
 
ಮಹಿಳೆಯರಿಗೆ ಮೀಸಲಾತಿ ಬೇಕೇ ಬೇಕು, ಕಾರಣ ಇಂದಿಗೂ ಇರುವುದು ಪುರುಷ ಪ್ರಧಾನ ಸಮಾಜ. ವರದಕ್ಷಿಣೆ, ವರೋಪಚಾರ, ವರದಕ್ಷಿಣೆಗಾಗಿ ಕೊಲೆ, ಮಾನಸಿಕ ಹಿಂಸೆ, ಪೀಡನೆಗಳಿಂದ ಮಹಿಳೆಯಿನ್ನೂ ಹೊರತಾಗಿಲ್ಲ. ಲಾಯರ್, ಜಡ್ಜ್, ಪೊಲೀಸ್, ಪ್ರೊಫೆಸರ್ ಎಂದು ಹೊರಗೆ ದುಡಿದರೂ ಮನೆಯಲ್ಲಿ ಗಂಡ, ಅತ್ತೆ, ನಾದಿನಿ, ಭಾವನವರ ಕಾಟ ತಡೆದು, ತುಟಿಕಚ್ಚಿ ಸಹಿಸಿ ಬದುಕುವ ಮಹಿಳೆಯರೆಷ್ಟಿಲ್ಲ? ಇನ್ನು ಭಾರತದ ಕಾನೂನಿನ ಬಗ್ಗೆ, ಅಲ್ಲಿನ ದುರ್ಗಂಧದ ಬಗ್ಗೆ ಗೊತ್ತಿರುವಾಗ ಒಂಟಿ ಹೆಣ್ಣೊಬ್ಬಲು ಕಾನೂನಿನ ಮೊರೆ ಹೊಕ್ಕಿ ಹೋದರೆ ಅಲ್ಲಿರುವ ಬೇಲಿಯೇ ಎದ್ದು ಹೊಲ ಮೇಯುತ್ತದೆ! ಮೀಡಿಯಾ ಇರುವ ವಿಚಾರವನ್ನು ತಿರುಚಿ ಪ್ರಸಾರ ಮಾಡುತ್ತದೆ! ಹೀಗಿರುವಾಗ ಹೆಣ್ಣಿಗೆ ಸದೃಢತೆಯಿಂದ ತನ್ನ ಜೀವನ ನಡೆಸಲು ಮಹಿಳಾ ಮೀಸಲಾತಿ ಅಡಿಯಲ್ಲಾದರೂ ಕೆಲಸ ದೊರೆತು, ತನ್ನ ಕಾಲ ಮೇಲೆ ತಾನು ನಿಂತು, ದಿಟ್ಟಳಾಗಿ, ಸ್ವತಂತ್ರ ಬದುಕು ಅನಿವಾರ್ಯವಲ್ಲವೇ?

ಇನ್ನು ಜಾತಿಗಳ ಬಗ್ಗೆ. ಆಯಾ ಜಾತಿಗಳಿಗೆ ಅದರದ್ದೇ ಆದ ಸಂಸ್ಕೃತಿಯಿದ್ದು ಸರಕಾರದಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಪಟ್ಟಿಯಿದೆ. ಬುಡಕಟ್ಟು ಜನಾಂಗಗಳು ಹಲವು ಇನ್ನೂ ಕಾಡಲ್ಲೇ ಇವೆ. ಹಾಡುಗಾರ ಹನುಮಂತನ ಜೀವನದ ಬಗ್ಗೆ ನಾವು ನೋಡಿ, ಕೇಳಿ ತಿಳಿದವರಾಗಿದ್ದೇವೆ. ಅಂತೆಯೇ ಅಂತಹ ಜನರಿಗೆ ಮೀಸಲಾತಿ ಸಿಕ್ಕಿದಾಗ ಆ ಜನರೂ ಪ್ರಪಂಚದ ಮುಖ್ಯ ವಾಹಿನಿಗೆ ಬರಲು ಅವಕಾಶ ಸಿಗುವುದಲ್ಲವೇ? ಹಾಗಾಗಿ ಮೀಸಲಾತಿ ತಪ್ಪೆನಿಸುವುದಿಲ್ಲ. ಇದನ್ನು ಇನ್ನೂ ಒಂದಷ್ಟು ವರುಷಗಳವರೆಗೆ ಮಾಡಬಹುದು ಎಂಬುದು ನನ್ನ ಅನಿಸಿಕೆ.

ನಿಜವಾಗಿ ಬುದ್ಧಿವಂತನಾದವನಿಗೆ, ಉತ್ತಮ ಅಂಕಗಳನ್ನು ಪಡೆದವನಿಗೆ ಕೆಲಸ ಸಿಗಲೇ ಬೇಕು. ಮೀಸಲಾತಿಗಳು ಇದನ್ನು ತಡೆಯುತ್ತವೆ ಎಂಬ ಮಾತೂ ನಿಜ. ಆದರೆ ಲಂಚ ತಾಂಡವವಾಡುತ್ತಿರುವ ಇಲ್ಲಿ ಅಂಕಗಳೂ, ತಿದ್ದುವಿಕೆಯೂ ದುಡ್ಡಿನ ಮೇಲೇ ನಡೆದರೇ? ಆಗ ಸಿರಿವಂತರಿಗೇ ಎಲ್ಲಾ ದೊರೆತು ಬಡವ ಮತ್ತೂ ಬಡವನಾಗುವುದಿಲ್ಲವೇ? ಅದರ ಬದಲು ಅರ್ಹರಿರುವ ಎಲ್ಲಾ ವರ್ಗದ ಈ ಮೀಸಲಾತಿಯಿಂದಲಾದರೂ ಜನರಿಗೂ ಸಿಗಲಿ ಕೆಲಸಗಳು! ಮತ್ತೆ ಓದಿ ಬರೆದು ಉನ್ನತ ಅಂಕಗಳ ಪಡೆದವ ಮಾತ್ರ ಒಂದು ಕೆಲಸವನ್ನು ಚೆನ್ನಾಗಿ ನಿಭಾಯಿಸಬಲ್ಲ ಎನ್ನುವುದು ತಪ್ಪು. ಕೆಲವೊಮ್ಮೆ ಕಾಮನ್ ಸೆನ್ಸ್, (ಸಾಮಾನ್ಯ ಜ್ಞಾನ).ಅನುಭವಗಳೂ ಬೇಕಾಗುತ್ತವೆ. 
  
ಹುಟ್ಟಿನಿಂದಲೇ ಸುಖದ ಸುಪ್ಪತ್ತಿಗೆಯಲ್ಲಿ ಬೆಳೆದ ಡಾಕ್ಟರ್  ಒಬ್ಬರಿಗೆ ಹಳ್ಳಿಯಲ್ಲಿ ಬಂದು ಕೆಲಸ ಮಾಡಬೇಕಾದ ಪರಿಸ್ಥಿತಿ ಬಂದರೆ ಅವರ ಹಣದ ಲೆಕ್ಕಾಚಾರ ಹಳ್ಳಿಗರಂತೆ ಹತ್ತಿಪ್ಪತ್ತು ರೂಪಾಯಿಗಳಲ್ಲಿ ಇರುವುದಿಲ್ಲ, ಬದಲಾಗಿ ಸಾವಿರಗಳಲ್ಲಿರುತ್ತದೆ. ಕಡುಬಡವರಾದವರಿಗೆ ತಮ್ಮ ಆರೋಗ್ಯ ಸುಧಾರಿಸಲು ಸಾಧ್ಯವೇ? ಅದೇ ಹಳ್ಳಿಯಲ್ಲೇ ಬೆಳೆದು ವೈದ್ಯನಾದವನಿಗೆ ಆ ಪರಿಸರದ ಜನರ ಕಷ್ಟಗಳ ಸಂಪೂರ್ಣ ಅರಿವಿರುತ್ತದೆ. ಶಾಲೆಯ ಶಿಕ್ಷಕ ಉತ್ತಮ ಅಂಕ ಪಡೆದು ತನ್ನ ವಿಷಯದಲ್ಲಿ  ನುರಿತವನಾದರೆ ಸಾಲದು. ಆಟೋಟ ಸ್ಪರ್ಧೆಗಳು, ಸಭಾ ಸಮಾರಂಭಗಳು, ಬಂದವರ ಸ್ವಾಗತ, ಕಟ್ಟಡ ರಿಪೇರಿ, ಟಾಯ್ಲೆಟ್ ನಿಂದ ತರಗತಿ ಕೋಣೆ, ಶಾಲಾ ವಾತಾವರಣ ಸ್ವಚ್ಛತೆ, ಪರಿಸರ ಜಾಗೃತಿ, ಸ್ಥಳೀಯ ಪರಿಸರದ ಮಹತ್ವ, ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ, ವಿದ್ಯಾರ್ಥಿಗಳನ್ನು ವಿವಿಧ ಕಲಾ ಸ್ಪರ್ಧೆಗಳಿಗೆ ತಯಾರುಗೊಳಿಸುವ ಕಲೆಯನ್ನೂ ಅರಿತಿರಬೇಕು. ಇದಕ್ಕೆ ಅವನು ಚಿಕ್ಕಂದಿನಿಂದ ಸರ್ವ ಜಾತಿಯ ಜನರೊಂದಿಗೂ ಕಲೆತು, ಬೆಳೆದು ಕಲಿತಿರಬೇಕು. ಕೇವಲ ನಗರದ ಶಾಲೆಗಳಲ್ಲಿ ಓದಿ ಅಂಕಗಳ ಪಡೆದ ಮಾತ್ರಕ್ಕೆ ಬರುವುದಿಲ್ಲ. ಅದಕ್ಕೆ ಭಾರತದಲ್ಲಿ ಪ್ರತಿ ಕೆಲಸಕ್ಕೂ ಬೇರೆ ಬೇರೆ ಜಾತಿ, ಧರ್ಮ, ಹಳ್ಳಿ, ಪಟ್ಟಣ, ಮಹಿಳೆ ಹೀಗೆ ಒಂದಾಗಿದ್ದಾಗ ಮಾತ್ರ ವಿವಿಧತೆಯಲ್ಲಿ ಏಕತೆ ಕಾಣಲು ಸಾಧ್ಯ. ನೀವೇನಂತೀರಿ?
@ಪ್ರೇಮ್@
19.06.2020
@prem@
ಪ್ರೇಮಾ ಉದಯ್ ಕುಮಾರ್
ಸ.ಪ.ಪೂ.ಕಾಲೇಜು ಐವರ್ನಾಡು
ಸುಳ್ಯ


@prem@





ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ