ಭಾನುವಾರ, ಜನವರಿ 31, 2021

ಪಂಜು ಪ್ರೇಮಪತ್ರ ಸ್ಪರ್ಧೆಗೆ

ಪಂಜು ಪ್ರೇಮಪತ್ರ ಸ್ಪರ್ಧೆಗೆ

                                                  ದಿನಾಂಕ 01.02.2021
                                                     ಸ್ಥಳ: ಹೃದಯಾಂತರಾಳ

ಪ್ರಿಯ ಹೃದಯಕ್ಕೆ,
               ನನ್ನೊಲವನು ಶಾಯಿಯಾಗಿ ಸುರಿದು,  ಜೀವನರಕ್ಷೆಯೆಂಬ ಲೇಖನಿಯಲಿ ಬರೆಯುತಿಹ ಮನದಾಳದಿಂದ ಬಂದ ಅಮೃತ ಪದಗಳಿವು ಒಲವೇ. ಮೊದಲನೆಯದಾಗಿ ನಾ ಪ್ರತಿನಿತ್ಯ ಹೇಳುವ ಮಾತನ್ನು ಮತ್ತೆ ಮತ್ತೆ ನಿನ್ನ ಕಿವಿಯಲ್ಲುಸುರುವ ಆಸೆ. ಅದೇನು ಗೊತ್ತೇ? ನಾ ನಿನ್ನ ಪ್ರೀತಿಸುತ್ತಿದ್ದೇನೆ ಚೆಲುವೇ. ನಾ ನಿನ್ನೊಲವಿಗೆ ಶರಣು ಹೋಗಿರುವೆ, ನಿನ್ನ ಬಾಳ ಬಾಂದಳದಲಿ ಬಾಳ ಚಂದಿರನಾಗಿ, ನಿನ್ನ ಬಾಳ ಭವಿತವ್ಯಕೆ ಸದಾ ಬೆಳದಿಂಗಳ ಚೆಲ್ಲಲು ಅವಕಾಶ ಕೊಟ್ಟಿರುವೆಯಲ್ಲವೇ?
        ಮುದ್ದು ಪ್ರೀತಿಯೇ, ನೀನೇಕೆ ಅಷ್ಟೊಂದು ಸುಂದರವಾಗಿರುವೆ? ಶಿಲ್ಪಿ ತನ್ಮಯತೆಯಿಂದ ಕೆತ್ತಿದ ದಂತದ ಗೊಂಬೆಯಂತೆ, ಕಲಾಕಾರ ಬರೆದ ಅಮೂರ್ತ ಶಿಲ್ಪದಂತೆ, ನಾಟ್ಯ ರಾಣಿಯಂತೆ, ಕವಿಯು ಹಾಡಿದ ಅದ್ಭುತ ಪ್ರೇಮಗೀತೆ ನೀನಾಗಿರುವೆ ನನ್ನೊಲವ ಕುಸುಮವೇ. ಹಿಮಾಲಯದ ಪರ್ವತಗಳ ತಂಪಿನ ಬಿಳುಪು ನಿನಗೆ, ಹಿಮಬಿಂದುವಿನಂಥ ಬೊಟ್ಟಿಡುವಾಸೆ ನನಗೆ. ಮೇಘಗಳನೇ ಕಟ್ಟಿ ನಿನಗೆ ಸೀರೆಯುಡಿಸುವಾಸೆಯೆನಗೆ, ಚೈತ್ರ ಮಾಸದ ಕೋಗಿಲೆಯೂ ನಿನಗಾಗೇ ಹಾಡುತಿದೆಯೆನುವ ಸ್ವಪ್ನ. ದೀಪದಂತಹ ಕಣ್ಣಿನಂದಕೆ ನಾಗವೇಣಿಯ ಚೆಲುವು. ಆಹಾ..ಅದೇನು ಮೋಡಿಯಿದೆ ಆ ನಿನ್ನ ಜಡೆಗೆ! ಅತ್ತಿಂದಿತ್ತ, ಇತ್ತಿಂದತ್ತ ಓಲಾಡುತಲಿ ಕೂಗಿ ಕರೆದಂತಿಹುದೆನ್ನ ನಿನ್ನೆಡೆಗೆ! ಆ ಕೈಬಳೆಯ ಸದ್ದೋ ನಾದ ಬೀರಿ ಕಲಕುತಿದೆ ಮೈಮನವ ಹಾಡುತಲಿ ಮನದಿ ಪ್ರೇಮ ರಾಗದ ಮೋಡಿಯ! ತಡೆಯಲಾರೆ ನನ್ನೆ ನಾನು….ನಿನ್ನ ಪ್ರೇಮ ಸಾಗರದಿ ತೇಲುತಿಹ ನೌಕೆ ನಾನು ಒಲವೇ!
      
           ನಿನ್ನ ನಾನು ಅದ್ಯಾವುದಕ್ಕೆ ಹೋಲಿಸಲಿ ನನ್ನ ಪ್ರೀತಿಯ ಕೋತಿಮರಿಯೇ? ಪೃಥ್ವಿಯಂತಿಹ ನನ್ನ ಕೀರ್ತಿಯ ಬೆಳಗಬೇಕಾದ ಅಪೂರ್ವ ರವಿಕಿರಣ ನೀನು…ನನ್ನುಸಿರ ಒಳಕಳಿಸಿ ಹೊರ ಹಾಕುತಿರುವ ಶಕ್ತಿ ನೀನು…ನನ್ನೊಡಲ ಬಡಿತ ನೀನು, ನನ್ನ ನರನರಗಳ ಮಿಡಿತ ನೀನು, ನನ್ನ ಪ್ರತಿ ಕ್ಷಣಗಳ ತುಡಿತ ನೀನು, ನನ್ನ ನೋಡಿ ಪರರಿಗಾಗುವ ಕಡಿತಕೆ ಕಾರಣವೂ ನೀನೇ ಪ್ರಿಯೆ!
        
      ದೇಹ ದೇಗುಲದ ಗರ್ಭ ಗುಡಿಯಲಿ ಪೂಜಿಸಲ್ಪಡುತಿರುವ ಮೂರ್ತಿಯೇ, "ಈ ಜೀವನ ಮೂರು ದಿನಗಳದು, ಈ ಬಾಳ್ವೆ ಚಿಕ್ಕದು" ಎಂದೆಲ್ಲ ಜನ ಹೇಳುವರು, ನೀ ಬಾಳಲಿರೆ ಪ್ರತಿ ದಿನವೂ ವರುಷದಂತೆ ದೊಡ್ಡದೇ ಮನವೇ. ಪ್ರತಿ ಕ್ಷಣವೂ ಗಂಟೆ, ಪ್ರತಿ ದಿನವೂ ವರುಷ ನಮಗೆ ಸಂತಸದಲಿ! ನಿನ್ನೊಂದಿಗೆ ಯುಗವೂ ಕ್ಷಣದಂತೆ ಕಳೆವುದೆಂಬುದನು ನಾ ಬಲ್ಲೆ! ಆದರೂ ನೀ ಜತೆಗಿದ್ದರೆ ಕಿರಿಯದಾದ ಬದುಕು ಹಿರಿಯದಾಗಲಿದೆಯಲ್ಲವೇ? ನೀ ಪ್ರತಿ ಕ್ಷಣವೂ ಕೊಡುವ ಸಂತಸ, ತುಂಬುವ ಧೈರ್ಯ, ನಾ ಪಡೆವ ಆತ್ಮವಿಶ್ವಾಸದ ಮಳೆಯನು ಮತ್ತಾರು ನನ್ನೆದೆಯಲಿ  ಸ್ಪುರಿಸಲು ಸಾಧ್ಯ ಸಖಿಯೇ? 
   
          ಅಮ್ಮನ ಕೈತುತ್ತು, ಆಗಸದ ಹೃದಯದ ಅಪ್ಪನ ಗಮನ, ತಂಗಿಯ ತುಂಟಾಟ, ಅಕ್ಕನ ಪಕ್ವತೆ, ತಮ್ಮನ ತರಲೆ, ಅಣ್ಣನ ಮೊಟಕುವಿಕೆ, ಅಜ್ಜಿಯ ಮುದ್ದು, ತಾತನ ತೂಕಭರಿತ ಅನುಭವದ ನುಡಿಮುತ್ತುಗಳೆಲ್ಲವೂ ನಿನ್ನಲ್ಲೇ ಸೇರಿಕೊಂಡಿವೆಯಲ್ಲವೇ ನನ್ನಾಕಾಶವೇ? ಅಷ್ಟೇ ಯಾಕೆ, ನನ್ನ ಗುರುಗಳ ಜ್ಞಾನವೆಲ್ಲವೂ ಕೂಡಾ ನಿನ್ನೊಳದು ಹೇಗೆ ಅಡಗಿ ಕುಳಿತಿಹುದೆಂದು ಯೋಚಿಸುತ್ತಾ ಕುಳಿತರೆ ನಾ ನಿನ್ನ ಪ್ರೀತಿಯ ಹುಚ್ಚನಾಗುವೆ ನನ್ನ ರಾಣಿ ಜೇನ್ನೊಣವೇ…!
     
      ಮನದೊಳಗೊಂದು ಮನ, ಜೀವದೊಳಗೊಂದು ಜೀವ, ಹೃದಯದೊಳಗೊಂದು ಹೃದಯ, ಭಾವದೊಳಗೊಂದು ಭಾವ, ನಲಿವಿನೊಳಗೊಂದು ನಲಿವಿದ್ದರೆ ಅದು ನೀನೇ. ನನ್ನ ಜೀವನ, ಬದುಕು, ಪ್ರತಿ ಕ್ಷಣ, ಹೃದಯ ಬಡಿತ, ನಾಡಿ ಮಿಡಿತ, ಪದಗಳ ಕವಿತೆ ಸರ್ವಸ್ವವೂ ನಿನಗೇ ಮೀಸಲು ಗೆಳತೀ..ನೀ ನನ್ನ ಭಾವಗಳ ಒಡತಿ, ಧರೆಯ ಸೂರ್ಯನಂತೆ ಬೆಳಗುತಿ, ಇರುಳ ಚುಕ್ಕಿಗಳಂತೆ ಮಿನುಗುತಿ, ಬಯಲ ಚೆಂಡಿನಂತೆ ಪುಟಿಯುತಿ, ಕಂಪ ಸೂಸುವ ಮಲ್ಲಿಗೆಯಂತೆ ಪ್ರೇಮದಿ ಅರಳುತಿ…ನಾ ಇರಲಾರೆ ನಿನ್ನ ಹೊರತು…

      ನವ್ಯ, ನವೀನ ಕಾವ್ಯಗಳೊಡತಿಯೇ, ದ್ವಿಭಾಜಕದ ಒಂದು ಬದಿಯ ಮುಳ್ಳಿನಂಥ ಮಿಡಿತವೇ, ನನ್ನ ಬಾಳರಥದ ಸಾರಥಿಯೇ, ನನ್ನೊಲವ ತೇರನೆಳೆಯುತಿಹ ಅಶ್ವವೇ, ಈ ಕೃಷ್ಣನ ರಾಧೆಯೇ, ರುಕ್ಮಿಣಿಯೇ, ಸತ್ಯಭಾಮಳೇ, ಚಂದ್ರವಳ್ಳಿಯೇ, ಜಾಂಬವತಿಯೇ, ಹದಿನಾರು ಸಾವಿರದ ಎಂಟು ಕನ್ಯೆಯರಿಗೂ ಸಮನಾದ ಮುತ್ತು ನೀನು! ಬಂಗಾರ,ವಜ್ರ, ವೈಡೂರ್ಯ, ಪಚ್ಚೆ, ಹವಳ, ನೀಲ, ಪ್ಲಾಟಿನಂಗಿಂತಲೂ ಶ್ರೇಷ್ಠ ರತ್ನವಲ್ಲವೇ ನೀ ನನ್ನ ಬಾಳಿಗೆ  ನನ್ನೊಡತಿ…
ಹಸಿರುಗಿಡದ ರುಚಿಯ ಹಣ್ಣಂತೆ, ಮೊಸರಲಿ ತೇಲುತಿಹ ರುಚಿಕರ ಶ್ವೇತ ಬೆಣ್ಣೆಯಂತೆ, ಕೆಸರಲರಳಿದ ನೈದಿಲೆಯ ಹೂವಂತೆ ನಿನ್ನ ಸ್ವಚ್ಛ ಆಗಸದ ಶುಭ್ರ ಮನ ನನ್ನಾಸೆಯ ಹೂವೇ..ನಾ ನಿನಗೇ ಕಾವೇ..ಓ ನನ್ನ ಜೀವವೇ.

        ಗಾಂಡೀವಿಗೆ ಮಾಧವನು ಜೊತೆಯಾದಂತೆ ನಿನ್ನ ಬದುಕ ರಥವನೆಳೆವೆ, ಪ್ರತಿ ಕ್ಷಣದಲೂ ಸಂತಸವನುಣಬಡಿಸುವೆ ಹನಿಬಿಂದುವೇ ನಿನ್ನ ಬುತ್ತಿಯಲಿ ನಾನಮೃತದ ತುತ್ತಾಗಿ. ಬಡತನ ಸಿರಿತನಗಳ ಮರೆತು ಪ್ರಿಯತಮನೊಳಗೊಂದಾಗು, ಜಾತಿ ಮತ ಭೇದದ ಬೇರುಗಳನು ಕಿತ್ತೆಸೆದು, ಪ್ರೇಮವೆಂಬ ಸಸಿಯ ನೆಟ್ಟು ಜಗವ ಹಸಿರಾಗಿಸೋಣ. ಅದಕೆ ಪ್ರೀತಿಯ ನೀರುಣಿಸಿ, ಜತೆಯಾಗಿ ಆರೈಕೆಯ ಗೊಬ್ಬರದಿ ಪೋಷಿಸೋಣ. ಜಗವೆಲ್ಲ ಹಸಿರಾದಂತೆ ಜನಮನವೆಲ್ಲ ಪ್ರೀತಿಯ ಫಲ ತಿನ್ನುವಂತಾಗಲಿ, ಪ್ರೇಮದ ಹೂವರಳಿ ನಿನ್ನ ಮುಡಿ ಸಿಂಗಾರಗೊಳ್ಳಲಿ. ಭಾವದಲೆಗಳು ಪ್ರೇಮಸಾಗರದಲಿ ತೇಲುತಲಿ, ದ್ವೇಷ ಮುಳುಗಿ, ಸ್ನೇಹ ಈಜಾಡಲಿ ನಮ್ಮ ಬಾಳ್ವೆಯ ತೆರದಿ, ಏನಂತೀಯಾ ಮನದ ನಯನವೇ?
    ಮೋಸ-ವಂಚನೆಗಳ, ಅಂಧಕಾರಗಳೋಡಿಸಿ, ಸ್ನೇಹಬಾಂಧವ್ಯವ ಬೆಸೆದು, ದೇಶ-ದೇಶಗಳ ಗಡಿಯಲೆಲ್ಲ ಪ್ರೀತಿ ತರಂಗವನೆಬ್ಬಿಸಿ, ಗಡಿಯ ಸೈನಿಕರಿಗೊಂದಿಷ್ಟು ದಿನ ಆರಾಮದುಸಿರು ಕೊಟ್ಟು, ಹೊಲದಿ ಸರ್ವ ಜನಕೆ ಊಟವನು ಬೆಳೆಸುತಿಹ ರೈತನೆದೆಯಲಿ ಧರೆಯ ಪ್ರೀತಿಯನುಕ್ಕಿಸಿ ಲೋಕದ ಜನಕೆ ಪ್ರೀತಿಯ ತುತ್ತನುಣಬಡಿಸುವ ಕಾಯಕವನು ಮಾಡುತಲಿ ಜಗಕೆ ಪ್ರೀತಿ ಪಾಠವ ಕಲಿಸುವ ಗುರುವಿನಂತಾಗಿ, ಪ್ರೀತಿಮಹಲುಗಳ ಕಟ್ಟುವ ಅಭಿಯಂತರರಾಗಿ, ಪ್ರೇಮ ಹೃದಯಗಳ ಜೋಡಿಸುವ ವೈದ್ಯರ ತೆರದಿ ಬಾಳಲು ಬಾಳಕತ್ತಲೆಯನೋಡಿಸಲು ಸೂರ್ಯೋದಯದಂತೆ ಆಗಮಿಸುವೆಯಾ ಈ ಇಳೆಗೆ ಇನನಾಗಿ, ಈ ಕಳೆ ತೊಲಗಿಸೊ ಮಳೆಯಾಗಿ ತಂಪೆರೆಯೊ ಜಲವಾಗಿ ಓ ಪ್ರೇಮದಗಂಗೆಯೇ?
         
       ಇಂತಿ ನಿನ್ನ ಹೃದಯ.

 ಹೃದಯದಿಂದ ಹೃದಯಕ್ಕೆ…ಹೃದಯದ ಉಸಿರ ದಾರಿಯಲಿ….
@ಪ್ರೇಮ್@
01.02.2021

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ