ಶುಕ್ರವಾರ, ಜನವರಿ 1, 2021

ನಾನು ನಾನೇ

ನಾನು ನಾನೇ

ನೀವು ನನ್ನ ಒರಟು ಶಬ್ದಗಳಿಂದ ಹೀಯಾಳಿಸಿ ನಿಂದಿಸಿ ನಾನು ನಾನೇ.
ಪರರ ಮಾತ ಕೇಳಿ ನನ್ನಂತರಂಗವನು ಅರಿಯದೆ ಹೀಗಳೆಯಿರಿ, ನಾನು ನಾನೇ..

ಮನಸರಿಯದೆ 'ಅವಳು ಹಾಗೇ' ಸರಿಯಿಲ್ಲವೆನ್ನಿ, ನಾನು ನಾನೇ.
ಹೊಗಳಿ ಹೊನ್ನಶೂಲಕೇರಿಸಿ, ನೀನೇ ಅಂದವೆನ್ನಿ, ನಾನು ನಾನೇ.

ನೀ ಮಾಡಿದ ಕಾರ್ಯ ಅತ್ಯುತ್ತಮ, ಹೀಗೇ ಮಾಡೆನುತ ಬೆನ್ನು ತಟ್ಟಿ.
ನಿನ್ನ ಕೆಲಸಕೆ ಅಂದ, ಅಂದ ಅಲಂಕಾರಗಳಿಲ್ಲವೆಂದು ಮೂದಲಿಸಿ, ನಾನು ನಾನೇ!

ಪ್ರಕೃತಿ, ಲಕ್ಷ್ಮಿ, ದೇವಿ, ಭಾರತಿ, ಭುವನೇಶ್ವರಿಗೆ ಹೋಲಿಸಿ,
ಹೆಮ್ಮಾರಿ, ಅಬಲೆ, ಕುಳ್ಳಿ, ಡುಮ್ಮಿಯೆನ್ನಿ , ನಾನು ನಾನೇ!

ಸಕಲ ಕಲಾ ವಲ್ಲಭೆ, ಬಹಳ ಕಲಿತವಳು, ಕಲಿಯುತಿರುವವಳು
ಯಾವ ಕೆಲಸವೂ ಬಾರದವಳೆನ್ನಿ, ನಾನು ನಾನೇ!

ತುಂಬಾ ಮೃದು ಹೃದಯಿ, ಕಷ್ಟಕೆ ಸ್ಪಂದಿಸುವವಳು,ಸಹಕಾರಿ
ಕಲ್ಲಿನಂಥ ಮನದವಳು, ದುರಹಂಕಾರಿಯೆನ್ನಿ, ನಾನು ನಾನೇ!

ಬಹಳ ಒಳ್ಳೆಯ ಗುಣದವಳು, ಕೈ ಹಿಡಿದೆತ್ತಿದವಳು, ಪರೋಪಕಾರಿ
ನೋವು ಕೊಟ್ಟವಳು, ಸೋಮಾರಿಯೆನ್ನಿ, ನಾನು ನಾನೇ..

ಜೀವನದಿ ದಾರಿ ತೋರಿದವಳು, ಸರಿದಾರಿಗೆ ಕರವಿಡಿದು ನಡೆಸಿದವಳು
ಹಾದಿ ತಪ್ಪಿಸಿ ಗುಂಡಿಗೆ ಹಾಕಿದವಳೆನ್ನಿ, ನಾನು ನಾನೇ.

ಮನೆಯಲ್ಲು ಮನದಲ್ಲು, ವದನದೊಳು, ಹೃದಯದೊಳು
ಕನಸಿನೊಳು, ನನಸಿನೊಳು ನನ್ನ ಅಮೂಲ್ಯ ಭಾವಗಳ ಅರಿತವಳು ನಾನು ನಾನೇ!
@ಪ್ರೇಮ್@
12.12.2020

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ