*ಕುಕ್ಕುರ್ ಬಿಟ್ಟೆ*
ನಾನಾಗ ದ್ವಿತೀಯ ಪಿಯುಸಿಯಲ್ಲಿದ್ದೆ. 2000ನೇ ಇಸವಿ. ಅದುವರೆಗೂ ಇದ್ದ ಝಿಂಕ್ ಶೀಟಿನ ಮನೆಯಿಂದ ಕುದುರೆಮುಖದಲ್ಲಿ ಹೆಂಚಿನ ಮನೆ ಕಟ್ಟುತ್ತಿದ್ದೆವು. ನಮ್ಮ ಬಳಿ ಫೋನ್ ಇರಲಿಲ್ಲ, ಏನಾದರೂ ವಿಷಯ ತಿಳಿಯಲು ಪಕ್ಕದ ಮನೆಗೆ ನಮ್ಮ ಸಂಬಂಧಿಕರು ಫೋನ್ ಮಾಡುತ್ತಿದ್ದರು. ಅಲ್ಲಿನ ಪಕ್ಕದ ಮನೆ ಸುಮಾರು ಒಂದು ಕಿಲೋ ಮೀಟರ್ ದೂರದಲ್ಲಿತ್ತು. ಒಂದು ಅಪ್ ಹತ್ತಿ ಎರಡು ಡೌನ್ ಇಳಿಯುವಷ್ಟು. ಅವರು ಫೋನ್ ಬಂದ ಕೂಡಲೇ 'ಇನ್ನರ್ಧ ಗಂಟೆ ಬಿಟ್ಟು ಕಾಲ್ ಮಾಡಿ ಕರೆಯುತ್ತೇವೆ, ವಿಷಯ ಏನಾದರೂ ಅರ್ಜೆಂಟ್ ಹೇಳುವುದಿದ್ದರೆ ಹೇಳಿ, ತಿಳಿಸುತ್ತೇವೆ' ಎಂದು ಬಹಳ ಸೌಜನ್ಯದಿಂದ ನಮ್ಮನ್ನು ಕರೆಯಲು ಬರುತ್ತಿದ್ದರು. ಅಲ್ಲಿ ನಮ್ಮ ಗೆಳತಿ ಪವಿತ್ರ ಇದ್ದುದರಿಂದ ಅದು ನಮಗೆ 'ಪವಿತ್ರನ ಮನೆ' ಆಗಿತ್ತು. ಅವರ ಮನೆಗೇನೋ ಹೆಸರಿತ್ತು. ಅದು ನಮಗೆ ಆಗಲೂ ತಿಳಿದಿರಲಿಲ್ಲ, ಈಗಲೂ ತಿಳಿದಿಲ್ಲ! ಅಲ್ಲಿಗೆ ಹೋಗಿ ನಾವು ಫೋನ್ ಬರುವವರೆಗೆ ಕಾಯುವಾಗ ಚಹಾ ಕುಡಿದು, ತಿಂಡಿ ತಿಂದು, ಅಲ್ಲಿನ ಪರಿಶಿಷ್ಟ ವರ್ಗದ ಬುಡಕಟ್ಟು ಜನರ ಕಾರ್ಯ ವೈಖರಿ ನೋಡಿ ಖುಷಿಪಡುತ್ತಿದ್ದೆವು. ತೋಟ, ಗದ್ದೆ, ಬುಟ್ಟಿ ಹೆಣೆಯುವುದು, ತೆಂಗಿನ ಹಾಳೆಯಲ್ಲಿ ಹೆಲ್ಮೆಟ್ ತರಹದ ಟೋಪಿ ಮಾಡುವುದು, ಪ್ರಾಣಿ ಬೇಟೆ, ಕಾಡಿನಲ್ಲಿ ಸಿಗುವ ಬೇರು, ಗೆಡ್ಡೆಗಳ ಸೇವನೆ ಇದೆಲ್ಲ ದಕ್ಷಿನ ಕನ್ನಡದಲ್ಲಿದ್ದ ನನಗೆ ಹೊಸದು. ತುಳು ಮಾತನಾಡಿ ಬೆಳೆದ ನನಗೆ ಅವರ ಮೋಡಿ ಲೋಕಲ್ ಗ್ರಾಮ್ಯ ಕನ್ನಡ ಅರ್ಥೈಸಿಕೊಳ್ಳಲು ಬಹಳ ಕಾಲ ಬೇಕಾಗುತ್ತಿತ್ತು. ಅವರು ನನ್ನ ಕನ್ನಡ ಭಾಷೆ ಕೇಳಿ ಎದ್ದು ಬಿದ್ದು ನಗುತ್ತಿದ್ದರು! ನನಗೆ ಆಗ ಹಲವಾರು ಕನ್ನಡ ಪದಗಳ ಪರಿಚಯವೇ ಇರಲಿಲ್ಲ!
ವಿಷಯ ಪಲ್ಲಟವಾದಂತಿದೆ. ಹಾಗೆ ಅವರ ಮನೆಗೆ ಫೋನಿಗಾಗಿ ಒಮ್ಮೆ ಹೋದಾಗ ಅವರ ಮನೆಯ ನಾಯಿ ಹಾಗೂ ಬೆಕ್ಕು ಮರಿ ಹಾಕಿದ್ದವು. ನಾವು ಹಾಲಿನ ವ್ಯಾಪಾರ ಮಾಡುತ್ತಿದ್ದ ಕಾರಣ ಬೆಕ್ಕು ಸಾಕುತ್ತಿರಲಿಲ್ಲ, ಅದು ಹಾಲಿನ ಪಾತ್ರೆಗೆ ಬಾಯಿ ಹಾಕಿ ಕೊಳಕು ಮಾಡುವುದಲ್ಲದೆ ಚೆಲ್ಲಿ ಬಿಡುತ್ತದೆಯೆಂದು. ಆದರೆ ಮುದ್ದು ಮುದ್ದಾದ ಹುಲಿಯ ಬಣ್ಣದ ನಾಯಿಮರಿಯನ್ನು ನೋಡಿ ನನಗೆ ಬಿಟ್ಟು ಬರಲು ಮನಸ್ಸಾಗಲೇ ಇಲ್ಲ. ಆ ಮರಿಯನ್ನು ಮನೆಗೆ ತಂದು ಅದಕ್ಕೆ ಡೀಗೋ ಎಂದು ಹೆಸರಿಟ್ಟೆವು. ಅದಕ್ಕೆ ಜೊತೆಗಿರಲೆಂದು ಕಣ್ಣಿನ ಮೇಲೆ ಭಾಗದಲ್ಲಿ ಕಣ್ಣಿನಂತೆ ಬಣ್ಣವಿರುವ ಕಪ್ಪು ಹಾಗೂ ಕಂದು ಬಣ್ಣದ ಮತ್ತೊಂದು ನಾಯಿ ಮರಿಯನ್ನು ತಂದೆ ಅದೆಲ್ಲಿಂದಲೋ ತಂದರು. ಪಿಯುಸಿ ಸೈನ್ಸ್ ಓದುತ್ತಿದ್ದ ನಾನು ಅದು ಸೌತೆಕಾಯಿಯ ಹಾಗಿದ್ದುದರಿಂದ ಅದರ ಸೈಂಟಿಫಿಕ್ ಹೆಸರಿನ ಒಂದು ಪದ ಕಕೂರ್ ಬಿಟ್ಟಾ ನೆನಪಿಸಿಕೊಂಡು ಆ ನಾಯಿಗೆ "ಕುಕುರ್ ಬಿಟ್ಟೆ" ಎಂದು ಹೆಸರಿಟ್ಟೆವು. ಅವೆರಡೂ ನಮ್ಮ ಮುದ್ದಿನ ನಾಯಿಗಳು, ಗೆಳೆಯರು, ಜತೆ ಆಟಗಾರರು, ಜೊತೆಯಲ್ಲೆ ವಾಕಿಂಗ್ ಮೇಟುಗಳು! ಲೇಟಾಗಿ ಎದ್ದರೆ ಶೆಲ್ಫ್ ನ ಮೇಲಿದ್ದ ಪುಸ್ತಕಗಳನ್ನು ಕಚ್ಚಿ ಕೆಳ ಹಾಕುತ್ತಿದ್ದವು. ಮನುಷ್ಯರಿಗಿಂತಲೂ ಜಾಸ್ತಿ ನಿಷ್ಠೆ, ಹೆಚ್ಚು ಪ್ರೀತಿ ಅವುಗಳಿಗೆ. ನಂತರ ನಾವು ಮುಂದಿನ ವಿದ್ಯಾಭ್ಯಾಸಕ್ಕೆ ಹಾಸ್ಟೆಲ್ ಗೆ ಹೋದಾಗ ಹೆಚ್ಚು ಮಿಸ್ ಮಾಡಿಕೊಂಡದ್ದು, ಫೋನ್, ಪತ್ರದಲ್ಲಿ ಹೆಚ್ಚು ಮಾತನಾಡಿದ್ದು, ಕೇಳಿದ್ದು, ಬರೆದದ್ದು ಅವುಗಳ ಬಗೆಗೇ!!!
@ಪ್ರೇಮ್@
25.12.2020
🐨🐨🐨🐨🐨🐨🐨🐶🐶🐶🐶🐶
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ